ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆ ಎಲ್ಲರ ಕರ್ತವ್ಯ: ಡಾ.ಶಾನುಭಾಗ್
ಉಡುಪಿ: ಹಿರಿಯ ನಾಗರಿಕ ರಕ್ಷಣೆ ಕಾಯ್ದೆ ೨೦೦೭ರ ಅರಿವಿನ ಕೊರತೆಯಿಂದಾಗಿ ವೃದ್ಧಾಪ್ಯದಲ್ಲಿ ಹಿರಿಯರನ್ನು ಅವರ ಮಕ್ಕಳು ಕಡೆಗಣಿಸುತ್ತಿ ದ್ದಾರೆ. ಹಿರಿಯ ನಾಗರಿಕರ ಹಕ್ಕುಗಳನ್ನು ತಿಳಿದುಕೊಳ್ಳುವುದು, ಜಾಗೃತಿ ಮೂಡಿಸುವುದು ಮತ್ತು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಹೇಳಿದ್ದಾರೆ.
ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎ.ವಿ.ಸಭಾಂಗಣದಲ್ಲಿ ಹಿರಿಯ ನಾಗರಿಕರ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಹಿಳಾ ಸಂಘ ಇದರ ಸಹಯೋಗದಲ್ಲಿ ಗುರುವಾರ ಆಯೋಜಿಸಲಾದ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ೨೦೦೭ರ ಅರಿವು ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ವೃದ್ಧಾಪ್ಯದಲ್ಲಿ ಪೋಷಕರನ್ನು ನೋಡಿಕೊಳ್ಳುವುದು ಕುಟುಂಬದ ಎಲ್ಲಾ ಸದಸ್ಯರ ನೈತಿಕ ಜವಾಬ್ದಾರಿ ಮಾತ್ರವಲ್ಲ ಅದು ಪ್ರತಿಯೊಬ್ಬನ ಮೂಲಭೂತ ಕರ್ತವ್ಯ ಆಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ ಶೆಟ್ಟಿ ಎಸ್. ಮಾತನಾಡಿ, ನಮ್ಮ ನಮ್ಮ ಮನೆಯ, ಕುಟುಂಬದ ಮತ್ತು ಸಮಾಜದಲ್ಲಿರುವ ಹಿರಿಯ ನಾಗರಿಕರನ್ನು ಗೌರವಿಸಿ, ಕಾಳಜಿ ವಹಿಸಿ, ಬೆಂಬಲಿಸಿ ಮತ್ತು ಪ್ರೀತಿಯಿಂದ ನೋಡಿಕೊಳ್ಳಬೇಕು. ನಮ್ಮಿಂದ ಹಿರಿಯ ನಾಗರಿಕರು ನಿರೀಕ್ಷಿಸು ವುದು ಕೇವಲ ಪ್ರೀತಿ, ಗೌರವ, ಮತ್ತು ಅವರ ಹಕ್ಕು ಗಳನ್ನು ಮಾತ್ರ ಅದನ್ನು ನೀಡಲು ನಮ್ಮ ಸಮಾಜದಿಂದ ಸಾಧ್ಯ. ಹಾಗಾಗಿ ಎಲ್ಲರು ಉತ್ತಮ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಹಿರಿಯ ನಾಗರಿಕರ ಸಂಘದ ಸದಸ್ಯರು ಮತ್ತು ಕಾಲೇಜಿನ ಎನ್.ಎಸ್.ಎಸ್ ಘಟಕ-೨ರ ಯೋಜನಾಧಿಕಾರಿ ವಿದ್ಯಾ ಡಿ. ಉಪಸ್ಥಿತರಿದ್ದರು. ಕಾಲೇಜಿನ ಮಹಿಳಾ ಸಂಘದ ಸಂಚಾಲಕಿ ಜಯಮಂಗಳ ಸ್ವಾಗತಿಸಿದರು. ಕಾಲೇಜಿನ ಎನ್.ಎಸ್.ಎಸ್ ಘಟಕ-೧ರ ಯೋಜನಾಧಿಕಾರಿ ಪ್ರೊ.ನಿಕೇತನ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿ, ಹಿರಿಯ ನಾಗರಿಕರ ಸಂಘದ ಸದಸ್ಯ ಮುರಳೀಧರ್ ವಂದಿಸಿದರು.