ಕುಂದಾಪುರ: ನಿದ್ದೆಗಣ್ಣಿನಲ್ಲಿ ರಾತ್ರಿ ಮನೆಯಿಂದ ಹೊರಬಂದ ಬಾಲಕಿಯ ರಕ್ಷಣೆ
ಕುಂದಾಪುರ, ಜು.20: ಮನೆಯಲ್ಲಿ ಮಲಗಿದ್ದ 5 ವರ್ಷ ಪ್ರಾಯದ ಹೆಣ್ಣುಮಗುವೊಂದು ನಿದ್ದೆಗಣ್ಣಿನಲ್ಲಿ ಮನೆಯಿಂದ ಸುಮಾರು 500ಮೀ. ದೂರ ರಸ್ತೆಯಲ್ಲಿ ನಡೆದು ಬಂದಿದ್ದು, ಹಾಲಾಡಿ-ಕುಂದಾಪುರ ಮುಖ್ಯ ರಸ್ತೆಯಲ್ಲಿ ಒಂಟಿಯಾಗಿ ನಿಂತಿದ್ದ ಬಾಲಕಿಯನ್ನು ಯುವಕರ ತಂಡವೊಂದು ರಕ್ಷಿಸಿ ಮನೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕುಂದಾಪುರದ ಹುಣ್ಸೆಮಕ್ಕಿ ನಿವಾಸಿ ವಿಶು ಎಂಬವರು ಬಾಲಕಿಯನ್ನು ರಕ್ಷಣೆ ಮಾಡಿದ್ದು ಬುಧವಾರ ತಡರಾತ್ರಿ ದಬ್ಬೆಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ವಿಶು ಅವರು ತಡರಾತ್ರಿ ಉದ್ಯೋಗ ಮುಗಿಸಿ ಮನೆಯಾದ ಹುಣ್ಸೆಮಕ್ಕಿ ಎಂಬಲ್ಲಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬಳಿ ಮಗುವೊಂದು ನಿಂತಿರುವುದು ಕಂಡುಬಂದಿದ್ದು, ಸಮೀಪ ತೆರಳಿದಾಗ ಭಯದಲ್ಲಿ ಬಾಲಕಿ ನಿಂತಿದ್ದು ವಿಚಾರಿಸಿ ಆಕೆಯ ಮನೆ ಪತ್ತೆ ಮಾಡಿ ಹೆತ್ತವರ ಸುಪರ್ದಿಗೆ ನೀಡಿದ್ದಾರೆ. ಬಾಲಕಿಯ ತಂದೆ ಕೆಲಸ ನಿಮಿತ್ತ ಮನೆಯಿಂದ ಹೊರಗಿದ್ದು ತಾಯಿ ಮಗಳು ಮನೆಯಲ್ಲಿದ್ದ ವೇಳೆ ನಿದ್ದೆಗಣ್ಣಿನಲ್ಲಿ ಬಾಲಕಿ ಮನೆಯಿಂದ ಹೊರ ನಡೆದು ಹೋಗಿದ್ದಾಳೆ ಎಂದು ತಿಳಿದುಬಂದಿದೆ.