ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯನಿಧಿ ಬಾಕಿ ನೀಡಲು ಆಗ್ರಹಿಸಿ ಪ್ರತಿಭಟನೆ
ಉಡುಪಿ : ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ನೇತೃತ್ವದಲ್ಲಿ ಕಳೆದೆರಡು ವರ್ಷ ಗಳಿಂದ ಬಾಕಿ ಇರುವ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಕೂಡಲೇ ಬಿಡುಗಡೆ ಗೊಳಿಸಲು ಒತ್ತಾಯಿಸಿ ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಕಟ್ಟಡ ಕಾರ್ಮಿಕರ ಕಾಯ್ದೆಯ ಪ್ರಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿದ್ದು, ನೊಂದಾಯಿತ ಕಾರ್ಮಿಕರ ಮಕ್ಕಳಿಗೆ ಬಾಲವಾಡಿಯಿಂದ ಉನ್ನತ ಶಿಕ್ಷಣದವರೆಗೆ ೫,೦೦೦ರೂ.ನಿಂದ ೭೫,೦೦೦ರೂ. ವರೆಗೆ ಶೈಕ್ಷಣಿಕ ಸಹಾಯವು ಹಿಂದಿನ ವರ್ಷಗಳಲ್ಲಿ ಮಕ್ಕಳಿಗೆ ಕ್ಲಪ್ತ ಸಮಯದಲ್ಲಿ ಸಿಗುತ್ತಿತ್ತು ಎಂದರು.
ಆದರೆ ಕಳೆದೆರಡು ಶೈಕ್ಷಣಿಕ ವರ್ಷಗಳಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಕಲ್ಯಾಣ ಮಂಡಳಿಯಿಂದ ಬಿಡುಗಡೆಯಾಗುತ್ತಿಲ್ಲ. ಅಲ್ಲದೇ ೨೦೨೩-೨೪ನೇ ವರ್ಷಕ್ಕೆ ಸಹಾಯಧನದ ಬಿಡುಗಡೆಎ ಅರ್ಜಿಯನ್ನೇ ಕಲ್ಯಾಣ ಮಂಡಳಿ ಕರೆದಿಲ್ಲ ಎಂದು ದೂರಿದರು.
ಹೀಗಾಗಿ ಹಿಂದಿನ ಶೈಕ್ಷಣಿಕ ವರ್ಷಗಳ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಈ ಸಾಲಿನ ಕಲಿಕೆಯ ವರ್ಷಕ್ಕೆ ಸಹಾಯಧನ ಪಡೆಯಲು ಕೂಡಲೇ ಅರ್ಜಿಯನ್ನು ಆಹ್ವಾನಿಸಬೇಕೆಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಂಘ ಆಗ್ರಹಿಸುತ್ತದೆ ಎಂದು ಬಾಲಕೃಷ್ಣ ಶೆಟ್ಟಿ ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಗೊಲ್ಲ, ಜಿಲ್ಲಾ ಖಜಾಂಚಿ ಗಣೇಶ್ ನಾಯ್ಕ್, ಉಪಾಧ್ಯಕ್ಷ ಸುಭಾಷ್ ನಾಯಕ್, ಮುಖಂಡರಾದ ಮುರಳಿ, ರಾಮ ಕಾರ್ಕಡ, ಸೈಯದ್, ರಮೇಶ್, ಸುರೇಶ್ ಪಡುಬಿದ್ರಿ, ಉದಯ ಪೂಜಾರಿ, ಶಾರದ ಗುಂಡ್ಮಿ, ರಾಘುನಾಥ, ರವಿ, ಶೇಖರ್ ಮರಕಾಲ, ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್., ಮೋಹನ್ ಉಪಸ್ಥಿತರಿದ್ದರು.