ತ್ಯಾಜ್ಯ ನಿರ್ವಹಣಾ ಶುಲ್ಕ ಪಾವತಿಗೆ ಕ್ಯೂಆರ್ ಕೋಡ್ !
ಕಾಡೂರು-ನಡೂರು ಗ್ರಾಮ ಪಂಚಾಯತ್‌ನಲ್ಲಿ ವಿನೂತನ ಸೌಲಭ್ಯ
ಉಡುಪಿ: ಡಿಜಿಟಲೀಕರಣ ಪ್ರಭಾವದಿಂದ ವಿದ್ಯುತ್, ಗ್ಯಾಸ್, ಕೇಬಲ್ ಶುಲ್ಕ, ಬಸ್, ರೈಲು, ವಿಮಾನ ಬುಕ್ಕಿಂಗ್ ಸೇರಿ ದಂತೆ ದೈನಂದಿನ ಹಲವು ವಹಿವಾಟುಗಳನ್ನು ನಗದು ರಹಿತವಾಗಿ ಮನೆಯಿಂದಲೇ ನಿರ್ವಹಿಸು ವಂತೆ ಇದೀಗ ಕಸ ಸಂಗ್ರಹ ಶುಲ್ಕವನ್ನೂ ಕ್ಯೂಆರ್ ಕೋಡ್ ಮೂಲಕ ಪಾವತಿಸುವ ವಿನೂತನ ಸೌಲಭ್ಯವನ್ನು ಪರಿಚಯಿಸಲಾಗಿದೆ.
ಉಡುಪಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಡೂರು-ನಡೂರು ಗ್ರಾಮ ಪಂಚಾಯತ್‌ನಲ್ಲಿ ತ್ಯಾಜ್ಯ ನಿರ್ವಹಣಾ ಶುಲ್ಕ ಪಾವತಿಯನ್ನು ಮನೆಯಲ್ಲೆ ಕುಳಿತು ನಗದು ರಹಿತವಾಗಿ ಪಾವತಿ ಮಾಡುವ ವ್ಯವಸ್ಥೆಯನ್ನು ತಮ್ಮ ಗ್ರಾಮಸ್ಥರಿಗೆ ಪರಿಚಯಿಸಿದೆ.
ತ್ಯಾಜ್ಯವೆಲ್ಲಾ ಸಂಪನ್ಮೂಲ ಎಂಬ ಪರಿಕಲ್ಪನೆಯೊಂದಿಗೆ ಕಾಡೂರು -ನಡೂರಿ ನಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿ ಗೊಂಡು 5 ವರ್ಷಗಳಾಗಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ಪ್ರತಿದಿನ ಸಂಗ್ರಹಿಸುವ ಘನ ಸಂಪನ್ಮೂಲ ನಿರ್ವಹಣಾ ಘಟಕದ ಶುಲ್ಕವನ್ನು ಪಾವತಿಸಲು ಕ್ಯೂಆರ್ ಕೋಡ್ ಮತ್ತು ಸ್ಕ್ಯಾನರ್ ಅಳವಡಿಸಿ, ನಗದು ರಹಿತ ಶುಲ್ಕ ಪಾವತಿಯು ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಸಮಸ್ಯೆಗಳಿಗೆ ಪರಿಹಾರ
ಕಾಡೂರು-ನಡೂರು ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳು ಒಂದಕ್ಕೊಂದು ಬಹಳ ದೂರದಲ್ಲಿದ್ದು, ಪ್ರತಿದಿನ ಕಸ ಸಂಗ್ರಹ ವ್ಯವಸ್ಥೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಆದರೆ ಕಸ ಸಂಗ್ರಹಣೆಯ ಶುಲ್ಕ ಪಾವತಿ ಸಮಯದಲ್ಲಿ ಮನೆಗಳಿಗೆ ಭೇಟಿ ನೀಡಲು ತುಂಬಾ ಕಷ್ಟಕರವಾಗಿದ್ದು, ಅಲ್ಲದೇ ಶುಲ್ಕ ಸಂಗ್ರಹಣೆಗೆ ತೆರಳಿದ ದಿನ, ಇವತ್ತು ಹಣ ಇಲ್ಲ, ನಾಳೆ ಅಥವಾ ಮತ್ತೊಮ್ಮೆ ಬನ್ನಿ ಎಂದರೆ ಮತ್ತೆ ಆ ಮನೆಗಳಿಗೆ ಸಕಾಲದಲ್ಲಿ ತೆರಳುವುದು ಸಾದ್ಯವಾಗುತ್ತಿರಲಿಲ್ಲ. ಅಲ್ಲದೇ ಶುಲ್ಕ ಸಂಗ್ರಹಣೆಯ ಸಿಬ್ಬಂದಿಗಳ ಕೊರತೆ ಕೂಡ ಕಾಡುತ್ತಿತ್ತು.
ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರಕಂಡುಕೊಳ್ಳುವ ಆಲೋಚನೆಯಲ್ಲಿ ಕ್ಯೂ ಆರ್ ಕೋಡ್ ಮತ್ತು ಸ್ಕ್ಯಾನರ್ ವ್ಯವಸ್ಥೆ ಮೂಲಕ ಶುಲ್ಕ ಪಾವತಿ ಮಾಡುವ ಕುರಿತಂತೆ ಪಂಚಾಯತ್‌ನ ಎಲ್ಲ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡು, ಗ್ರಾಮಸ್ಥರ ಮನ ಒಲಿಸಿದ ಪರಿಣಾಮ ಈ ಯೋಜನೆ ಯಶಸ್ವಿ ಯಾಗಿ ಜಾರಿಗೊಂಡು, ನಗದು ರಹಿತ ಶುಲ್ಕ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.
ವಾಟ್ಸಾಪ್ ಗ್ರೂಪ್ ರಚನೆ
ಈ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಪಂನ ಎಲ್ಲಾ ವಾರ್ಡ್‌ವಾರು ಎಲ್ಲಾ ಮನೆಗಳ ಮೊಬೈಲ್ ಸಂಖ್ಯೆಗಳ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು, ಸಂಬಂಧಿ ಸಿದ ವಾರ್ಡ್ ಸದಸ್ಯರು ಸಹ ಇದರಲ್ಲಿ ನೊಂದಣಿಯಾಗಿ ಮೇಲ್ವಿಚಾರಣೆ ನಡೆಸುತ್ತಿರುವುದು ವಿಶೇಷವಾಗಿದೆ.
ಪ್ರತೀ ತಿಂಗಳ ಶುಲ್ಕದ ವಿವರಗಳನ್ನು ಕ್ಯೂಆರ್ ಕೋಡ್ ಮತ್ತು ಸ್ಕ್ಯಾನರ್ ಮೂಲಕ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಲಾಗುತ್ತಿದ್ದು, ಗ್ರಾಮಸ್ಥರೂ ಸಹ ಈ ವ್ಯವಸ್ಥೆಗೆ ಉತ್ತಮ ಸ್ಪಂದನೆ ತೋರಿದ್ದಾರೆ. ಗ್ರಾಮದ ಹಲವು ಮನೆಗಳಲ್ಲಿ ದುಡಿಯುವ ವ್ಯಕ್ತಿ ಬೇರೆ ಊರಿನಲ್ಲಿ ಇದ್ದು ಅವರು ಅಲ್ಲಿಂದಲೇ ತಮ್ಮ ಮನೆಯ ಶುಲ್ಕವನ್ನು ಪಾವತಿ ಮಾಡುತ್ತಿದ್ದು, ಗ್ರಾಮ ಪಂಚಾಯತ್ ನ ಈ ವಿನೂತನ ವ್ಯವಸ್ಥೆಗೆ ಬೆಂಬಲ ಸೂಚಿಸಿದ್ದಾರೆ.
ಗ್ರಾಮ ಪಂಚಾಯತ್‌ನಲ್ಲಿ ದೊರೆಯುವ ಮಾಸಿಕ ಸಂಭಾವನೆಯನ್ನು ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹಸ್ತಾಂತರಿಸುವ ಸದಸ್ಯರಿರುವುದು ಈ ಗ್ರಾಮಗಳ ಸ್ವಚ್ಛತಾ ಜಾಗೃತಿಗೆ ಸಾಕ್ಷಿಯಾಗಿದೆ. ಈಗಾಗಲೇ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿ ಜಿಲ್ಲೆಯಲ್ಲಿ ಮಾದರಿ ಗ್ರಾಪಂ ಆಗಿ ಗುರುತಿಸಿಕೊಂಡಿರುವ ಈ ಪಂಚಾಯತ್ ಹಲವು ಜಿಲ್ಲೆಗಳ ವಿಷಯಾಸಕ್ತ ಅಧಿಕಾರಿಗಳಿಗೆ ಅಧ್ಯಯನ ಕೇಂದ್ರವಾಗಿಯೂ ರೂಪುಗೊಂಡಿದೆ.
ತಿಂಗಳಿಗೆ 16 ಟನ್ ಒಣ ತ್ಯಾಜ್ಯ ನಿರ್ವಹಣೆ!
ಕಾಡೂರು ಮತ್ತು ನಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5000 ಜನಸಂಖ್ಯೆಯಿದ್ದು, 1106 ಕುಟುಂಬಗಳು, 36 ಅಂಗಡಿ/ವಾಣಿಜ್ಯ ಸಂಕೀರ್ಣ ಗಳಿದ್ದು ಪ್ರತೀ ತಿಂಗಳು 12 ರಿಂದ 16 ಟನ್ ಒಣ ತ್ಯಾಜ್ಯ ನಿರ್ವಹಣೆ ನಡೆಯುತ್ತಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮಗಳಗೆ ಆದ್ಯತೆ ನೀಡಿದ್ದಾರೆ. ಗ್ರಾಮಸ್ಥರಿಗೆ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವಲ್ಲಿ ತ್ಯಾಜ್ಯ ನಿರ್ವಹಣಾ ಘಟಕದ ಮೇಲ್ವಿಚಾರಕರ ಪಾತ್ರವೂ ಸಹ ಮಹತ್ವದ್ದಾಗಿದೆ.
‘ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಶುಲ್ಕ ಸಂಗ್ರಹವನ್ನು ವ್ಯವಸ್ಥಿತವಾಗಿ ಜರುಗಿಸುವಂತೆ ನಿರ್ದೇಶನಗಳನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಕಾಡೂರು-ನಡೂರು ಗ್ರಾಮ ಪಂಚಾಯತ್ ಕೈಗೊಂಡಿರುವ ವಿನೂತನ ಪ್ರಯತ್ನ ಮಾದರಿಯಾದುದು. ಇದರಿಂದ ಪಾರದರ್ಶಕ ನಿರ್ವ ಹಣೆಯ ಜೊತೆಗೆ ನಾಗರಿಕರಿಗೆ ಪಾವತಿಗೂ ಅನುಕೂಲವಾಗಲಿದೆ’
-ಪ್ರಸನ್ನ ಎಚ್., ಸಿಇಓ, ಜಿಪಂ, ಉಡುಪಿ.
‘ಪಂಚಾಯತ್ ವ್ಯಾಪ್ತಿಯಲ್ಲಿ ಜಲಜಾಗೃತಿ ಹಾಗೂ ಸ್ವಚ್ಛತಾ ಜಾಗೃತಿಗೆ ಪಂಚಾಯತ್‌ನ ಎಲ್ಲಾ ಜನಪ್ರತಿನಿಧಿಗಳು ಆದ್ಯತೆ ನೀಡಿದ್ದೇವೆ. ಗ್ರಾಮದ ಸ್ವಾವಲಂಬಿ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ಹೊಸ ಪ್ರಯತ್ನಗಳಿಗೆ ಸಿದ್ಧತೆ ನಡೆಸಿದ್ದೇವೆ’
-ಪಾಂಡುರಂಗ ಶೆಟ್ಟಿ, ಅಧ್ಯಕ್ಷರು, ಕಾಡೂರು-ನಡೂರು ಗ್ರಾಪಂ