ಶಿವಮೊಗ್ಗದಲ್ಲಿ ರಾಘವೇಂದ್ರರ ಸೋಲು ನೂರಕ್ಕೆ ನೂರು ಖಚಿತ, ಬರೆದಿಟ್ಟುಕೊಳ್ಳಿ: ಕೆ.ಎಸ್.ಈಶ್ವರಪ್ಪ
ಬೈಂದೂರು: ಮೋದಿ ಯಾರಪ್ಪನ ಆಸ್ತಿ..? ರಾಘವೇಂದ್ರನಿಗೆ ಮಾತ್ರ ಮೋದಿನಾ? ಅಥವಾ ಅವರೊಬ್ಬ ವಿಶ್ವನಾಯಕರಾ ಎಂಬುದು ನ್ಯಾಯಾಲಯ ತೀರ್ಮಾನ ಮಾಡಲಿ ಎಂದು ಬಿ.ವೈ ರಾಘವೇಂದ್ರ ವಿರುದ್ಧ ಕೆ.ಎಸ್ ಈಶ್ವರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕುಂದಾಪುರ ಸಮೀಪದ ಹೆಮ್ಮಾಡಿಯ ಖಾಸಗಿ ಹೋಟೆಲ್ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಯಾರ ಬೆದರಿಕೆಗೆ ಬಗ್ಗಲ್ಲ. ಯಾರಿಗೆ ಹೆಚ್ಚು ಕೇಸ್ ಇರುತ್ತೆಯೋ ಅವನೇ ನಿಜವಾದ ಲೀಡರ್ ಎಂದು ಬಿಜೆಪಿಯನ್ನು ಅಣಕಿಸಿದರು.
ನನ್ನ ಮಗ ಕಾಂತೇಶ್ ಗೆ ಹಾವೇರಿಯಲ್ಲಿ ಟಿಕೆಟ್ ಕೊಡಿಸುವುದಾಗಿ ಆಣೆ ಮಾಡಿದ್ದರು. ತಾನೇ ಓಡಾಡಿ ಗೆಲ್ಲಿಸ್ತೀನಿ ಎಂದು ಯಡಿಯೂರಪ್ಪ ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ಬಿಜೆಪಿಯು ಪಕ್ಷ ಸಿದ್ದಾಂತ ಬಿಟ್ಟು ಕುಟುಂಬ ರಾಜಕಾರಣದತ್ತ ಹೋಗಿದ್ದು ಅದನ್ನು ಶುದ್ಧ ಮಾಡಲು ನನ್ನ ಸ್ಪರ್ಧೆ ಹೊರತು ಬಿಜೆಪಿ ವಿರುದ್ಧ ಸ್ಪರ್ಧೆಯಲ್ಲ ಎಂದರು.
ಬಿಜೆಪಿಯ ನೊಂದ ಹಲವು ಕಾರ್ಯಕರ್ತರು ನನ್ನ ನಂಬಿದ್ದಾರೆ. ಹಿಂದುತ್ವಕ್ಕೆ ನ್ಯಾಯ ಸಿಗಬೇಕಾದರೆ ನಾನು ಗೆಲ್ಲಬೇಕು ಎಂದು ಹಿಂದುತ್ವವಾದಿಗಳು ಬಯಸಿದ್ದಾರೆ. ಜನರ ಬೆಂಬಲ, ನೊಂದ ಕಾರ್ಯಕರ್ತರು, ಹಿಂದುತ್ವವಾದಿಗಳ ಬೆಂಬಲದಿಂದ ಚುನಾವಣೆ ಗೆಲ್ಲುವ ವಿಶ್ವಾಸವಿದೆ. ಹಿಂದೂ ಸಮಾಜ ನನಗೆ ಬೆಂಬ ನೀಡಿದೆ ಎಂದರು.
ಯಡಿಯೂರಪ್ಪ ಕೆಜೆಪಿ ಕಟ್ಟಿದ್ದು ಅಧಿಕಾರ ದಾಹದಿಂದ. ನನ್ನಂತ ನಾಯಕ ಮತ್ತೊಬ್ಬನಿಲ್ಲ ಎಂದು ಯಡಿಯೂರಪ್ಪ ಕೇಂದ್ರದವರಿಗೆ ಮಂಕುಬೂದಿ ಎರಚಿದ್ದಾರೆ. ಅಮಿತ್ ಷಾ ಕಳೆದ ವಾರ ಕರೆ ಮಾಡಿದಾಗ 'ಅಪ್ಪ-ಮಕ್ಕಳ ಕೈಗೆ ಪಕ್ಷ ಕೊಟ್ಟು ಕೇಂದ್ರದಲ್ಲಿ ಕುಟುಂಬ ರಾಜಕಾರಣ ಮುಕ್ತಿಗೆ ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದೆ. ಹಿಂದುತ್ವಕ್ಕೆ ಹೋರಾಟ ಮಾಡಿದವರ ಕಡೆಗಣನೆ ಮಾಡಲಾಗಿದೆ. ಯಾವುದೋ ಜಾತಿ, ಹೊಸಬರಿಗೆ ಮಣೆ ಹಾಕಲಾಗಿದೆ' ಎಂದು ಷಾ ಅವರ ಗಮನಕ್ಕೆ ತಂದೆ. ಎಂದು ಹೇಳಿದರು.
ದೆಹಲಿಗೆ ಹೋದಾಗ ಅಮಿತ್ ಷಾ ಅವರನ್ನು ಭೇಟಿ ಮಾಡಲು ಆಗಿಲ್ಲ. ನಾನು ಹೇಳಿದ ಅಂಶದ ಬಗ್ಗೆ ಷಾ ಹಾಗೂ ಮೋದಿ ಕೂತು ಚರ್ಚೆ ಮಾಡಿರಬಹುದು. ಚುನಾವಣೆಯಲ್ಲಿ ನಿಂತು ಗೆಲ್ಲಲಿ ಎಂದು ಅವರ ಅನಿಸಿಕೆ ಇರಬಹುದು ಎಂಬುದು ನನ್ನ ಭಾವನೆ ಎಂದರು.
ದೊಡ್ಡವರ ಮಾತು ಜೀವನದಲ್ಲಿ ಮೀರಿಲ್ಲ. ಸಂಘಟನೆ ಹೇಳಿದ ಮಾತು ಕೇಳಿಕೊಂಡು ಬಂದವನು ನಾನು. ಈಶ್ವರಪ್ಪ ವಾಪಾಸ್ ಆಗ್ತಾರೆ ಅಂತಾ ಈಗಲು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬ್ರಹ್ಮ ಬಂದರೂ ನಾನು ನನ್ನ ನಿರ್ಧಾರದಿಂದ ವಾಪಾಸ್ಸಾಗಲ್ಲ. ನೂರಕ್ಕೆ ನೂರು ರಾಘವೇಂದ್ರ ಸೋಲುತ್ತಾರೆ. ಇದನ್ನು ಬರೆದಿಟ್ಟುಕೊಳ್ಳಿ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಗೋಪಾಲ ನಾಡ, ಶ್ರೀಧರ್ ಬಿಜೂರು, ಕಟ್ ಬೆಲ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ ಪುತ್ರನ್, ಮೀನುಗಾರ ಮುಖಂಡ ಮೋಹನ್ ಖಾರ್ವಿ ಮೊದಲಾದವರಿದ್ದರು.