2 ವರ್ಷದ ಮಗುವಿನ ಹೃದಯ ಚಿಕಿತ್ಸೆಗಾಗಿ ಮತ್ತೆ ವೇಷ ಹಾಕಲಿದ್ದಾರೆ ರವಿ ಕಟಪಾಡಿ

ರವಿ ಕಟಪಾಡಿ
ಉಡುಪಿ, ಸೆ.4: ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಪ್ರತಿವರ್ಷ ತನ್ನ ವಿಶಿಷ್ಟ ವೇಷಗಳ ಮೂಲಕ ಜನರನ್ನು ಆಕರ್ಷಿಸಿ ಸಂಗ್ರಹವಾಗುವ ದೊಡ್ಡಮೊತ್ತದ ಹಣವನ್ನು ಮಕ್ಕಳ ರೋಗ ಚಿಕಿತ್ಸೆಗಾಗಿಯೇ ವ್ಯಯಿಸುವ ಸಮಾಜ ಸೇವಕ ರವಿ ಕಟಪಾಡಿ ಅವರು ಈ ಬಾರಿ ಕುಂದಾಪುರದ 2 ವರ್ಷದ ಮಗುವಿನ ಹೃದಯ ಚಿಕಿತ್ಸೆಗಾಗಿ ಮತ್ತೆ ವೇಷ ಧರಿಸಲಿದ್ದಾರೆ.
ಇಂದು ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರವಿ ಕಟಪಾಡಿ, ತನ್ನ ಮನನೋಯಿಸಿದ ಕೆಲವು ಕಾರಣಗಳಿಗಾಗಿ ಈ ಬಾರಿ ಡಬ್ಬ ಹಿಡಿದು ಹಣ ಸಂಗ್ರಹಿಸುವುದಿಲ್ಲ ಎಂದು ಹೇಳಿದ ರವಿ, ನನ್ನ ಸದುದ್ದೇಶವನ್ನು ತಿಳಿದಿರುವ ಯಾರೇ ಆದರೂ ನೀಡುವ ಹಣವನ್ನು ಪಡೆಯುವುದಾಗಿ ತಿಳಿಸಿದರು.
ಈ ಬಾರಿ ಸತತ 9ನೇ ವರ್ಷದಲ್ಲಿ ತಾವು ವಿಶಿಷ್ಟ ವೇಷ ಧರಿಸುತ್ತಿರುವುದಾಗಿ ಹೇಳಿದ ಕೂಲಿಕಾರ್ಮಿಕನಾಗಿ ದುಡಿಯುವ ರವಿ ಕಟಪಾಡಿ, ಹಿಂದಿನ ಎಂಟು ವರ್ಷಗಳಲ್ಲಿ ಒಟ್ಟು ಒಂದು ಕೋಟಿ 13 ಲಕ್ಷ ರೂ. ಸಂಗ್ರಹಿಸಿದ್ದು, ತೀವ್ರರೀತಿಯ ಅಸೌಖ್ಯದಿಂದ ನರಳುವ 113 ಮಕ್ಕಳಿಗೆ ಈ ಹಣವನ್ನು ಅವರ ಚಿಕಿತ್ಸೆಗಾಗಿ ನೀಡಿದ್ದಾಗಿ ತಿಳಿಸಿದರು.
ಈ ಬಾರಿ ಕುಂದಾಪುರದ ಎರಡು ವರ್ಷದ ಮಗುವಿನ ಹೃದಯ ಚಿಕಿತ್ಸೆಗಾಗಿ ಸಂಗ್ರಹವಾದ ಹಣವನ್ನು ನೀಡುತ್ತೇನೆ. ಮಂಗಳೂರಿನಲ್ಲಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಮಗುವಿಗೆ 15 ಲಕ್ಷರೂ.ಗಳ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಾನು ಕೈಲಾದಷ್ಟು ಸಂಗ್ರಹಿಸಿ ನೀಡುತ್ತೇನೆ. ಹಣದಲ್ಲಿ ಉಳಿಕೆಯಾದರೆ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ಇನ್ನೊಂದು ಮಗುವಿನ ಚಿಕಿತ್ಸೆಗೆ ನೀಡುವುದಾಗಿ ಹೇಳಿದರು.
ಸೀ ಪೋಕ್ ವೇಷ: ಈ ಬಾರಿ ಇಂಗ್ಲೀಷ್ ಚಿತ್ರ ‘ಸೀ ಪೋಕ್’ನ ಪಾತ್ರವೊಂದರ ವೇಷ ಧರಿಸುವುದಾಗಿ ಹೇಳಿದ ಅವರು, ರವಿ ಫ್ರೆಂಡ್ಸ್ ತಂಡ ಹಿಂದಿನಂತೆ ಕಟಪಾಡಿ, ಉದ್ಯಾವರ, ಪಡುಕೆರೆ, ಮಲ್ಪೆ ಹಾಗೂ ಉಡುಪಿಯಲ್ಲಿ ಸೆ.6 ಮತ್ತು 7ರಂದು ಸಂಚರಿಸಿ ಹಣ ಸಂಗ್ರಹಿಸಲಿದೆ. ಈ ಬಾರಿ ಬಾಕ್ಸ್ನೊಂದಿಗೆ ಜನರ ಬಳಿ ತೆರಳುವುದಿಲ್ಲ. ಅವರಾಗಿಯೇ ಹಣ ನೀಡಿದರೆ ಪಡೆಯುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರವಿ ಫ್ರೆಂಡ್ಸ್ನ ಸಲಹೆಗಾರ ಕೆ.ಮಹೇಶ್ ಶೆಣೈ, ವಿಶ್ವಾಸ್ ಹಾಗೂ ಮುಹಮ್ಮದ್ ರಜಿಯುಲ್ಲಾ ಉಪಸ್ಥಿತರಿದ್ದರು.
ರವಿ ಕಟಪಾಡಿ ಅವರ ಈ ಸಮಾಜ ಸೇವೆ ರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದ್ದು, ಕಳೆದ ವರ್ಷ ಬಾಲಿವುಡ್ನ ಅಮಿತಾಬ್ ಬಚ್ಚನ್ ತನ್ನ ಕೆಬಿಸಿ ಕಾರ್ಯಕ್ರಮಕ್ಕೆ ರವಿಯವರನ್ನು ಕರೆಸಿ ಕಾರ್ಯಕ್ರಮ ಪ್ರಸಾರ ಮಾಡಿದ್ದರು.