ಆಯುಷ್ಮಾನ್ ಭಾರತ ಯೋಜನೆಗೆ ಆಯುರ್ವೇದ ಸೇರಿಸಲು ಕೇಂದ್ರಕ್ಕೆ ಮನವಿ: ಡಾ.ವೀರೇಂದ್ರ ಹೆಗ್ಗಡೆ
ಉಡುಪಿ: ಆಯುರ್ವೇದವನ್ನು ಕೂಡ ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಇದರಿಂದ ಬಡ ರೋಗಿಗಳಿಗೆ ಬಹಳಷ್ಟು ಅನುಕೂಲ ವಾಗಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಉಜಿರೆ ಎಸ್‌ಡಿಎಂ ಶಿಕ್ಷಣ ಸಂಘದ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಉಡುಪಿ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಭಾವನಾಪ್ರಕಾಶ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ‘ಪ್ರಜ್ಯೋತಿ- 2023’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆಸ್ಪತ್ರೆಯಲ್ಲಿ ಒಳ ಹಾಗೂ ಹೊರರೋಗ ವಿಭಾಗದಲ್ಲಿ ದಾಖಲಾಗುವ ರೋಗಿಗಳು ಕಾಲೇಜಿನ ಹಳೆ ವಿದ್ಯಾರ್ಥಿಗಳ ಮೇಲಿನ ವಿಶ್ವಾಸದಿಂದ ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳಲು ಆಗಮಿಸುತ್ತಿದ್ದಾರೆ. ಆಯುರ್ವೇದ ಚಿಕಿತ್ಸೆ ಎಂಬುದು ಅತ್ಯಂತ ಕಡಿಮೆ ದರ ಎಂಬ ಮನೋಭಾವ ಇದೆ. ಆದರೆ ಆಸ್ಪತ್ರೆಗೆ ಬಡವರು ಹಾಗೂ ಶ್ರೀಮಂತರು ಕೂಡ ಬರುತ್ತಾರೆ. ಶ್ರೀಮಂತರು ಆಯುರ್ವೇದದಲ್ಲಿ ಉತ್ತಮ ಸೇವೆ, ಗುಣಮಟ್ಟದ ಚಿಕಿತ್ಸೆಯನ್ನು ನಿರೀಕ್ಷೆ ಮಾಡು ತ್ತಾರೆ ಎಂದರು.
ಆಯುರ್ವೇದ ಆಸ್ಪತ್ರೆಗಳಲ್ಲೂ ಹೆಚ್ಚಿನ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೌಲಭ್ಯವನ್ನು ನೀಡಿ ಆರೋಗ್ಯ ಸುಧಾರಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ವಿದ್ಯಾ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಸಂಸ್ಥೆಯ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ರೋಗ ನಿದಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ವಿ.ಪ್ರಸನ್ನ ಅವರನ್ನು ಸನ್ಮಾನಿಸ ಲಾಯಿತು. ಹಳೆ ವಿದ್ಯಾರ್ಥಿಗಳ ಸೌಲಭ್ಯ ಗಳ ಕಾರ್ಡ್‌ನ್ನು ಅನಾವರಣಗೊಳಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಹಾಸನ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ. ನಾರಾಯಣ ಟಿ.ಅಂಚನ್, ಉಡುಪಿ ಎಸ್‌ಡಿಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಭರತೇಶ್ ಎ. ಪ್ರಾಸ್ತಾವಿಕವಾಗಿ ಮಾತನಾಡಿ ದರು. ಡಾ.ವ್ಯಾಸರಾಜ ತಂತ್ರಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಡಾ.ಮುಹಮ್ಮದ್ ಇಕ್ಬಾಲ್ ವಂದಿಸಿದರು. ಸಹಪ್ರಾಧ್ಯಾಪಕ ಡಾ.ಅರುಣ್ ಕುಮಾರ್ ಮತ್ತು ಸಹಾಯಕ ಪ್ರಾಧ್ಯಾಪಕ ಡಾ.ಶುಭ ಪಿ. ಕಾರ್ಯಕ್ರಮ ನಿರೂಪಿಸಿದರು.