ದಲಿತ ಕುಟುಂಬಗಳಿಗೆ ನಳ್ಳಿ ನೀರಿನ ಸಂಪರ್ಕ ಕಲ್ಪಿಸುವಂತೆ ಮನವಿ
ಬ್ರಹ್ಮಾವರ, ಆ.24: ಹಂದಾಡಿ ಗ್ರಾಪಂ ವ್ಯಾಪ್ತಿಯ ಪರಿಶಿಷ್ಟ ಜನಾಂಗದ ಕುಟುಂಬಗಳ ವೈಯುಕ್ತಿಕ ಕುಡಿಯುವ ನಳ್ಳಿ ನೀರಿನ ಸಂಪರ್ಕವನ್ನು ಕಾನೂನು ಬಾಹಿರವಾಗಿ ಕಡಿತಗೊಳಿಸಿದ್ದು, ಕೂಡಲೇ ಸಂಪರ್ಕ ಕಲ್ಪಿಸಿ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿ ನಿಯೋಗ ಗ್ರಾಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದೆ.
ಹಂದಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಬಹುತೇಕ ಪರಿಶಿಷ್ಟ ಜನಾಂಗದ ಕುಟುಂಬ ಗಳು ದೈನಂದಿನ ಕುಡಿಯುವ ನೀರಿಗಾಗಿ ಗ್ರಾಪಂ ವತಿಯಿಂದ 12 ವರ್ಷ ಗಳಿಂದ ಸಂಪರ್ಕ ನೀಡಿರುವ ನಳ್ಳಿ ನೀರನ್ನೇ ಅವಲಂಬಿಸಿದೆ. ಅದು ಬಿಟ್ಟು ಈ ಕುಟುಂಬ ಗಳಿಗೆ ಬೇರೆ ಯಾವುದೇ ನೀರಿನ ವ್ಯವಸ್ಥೆ ಇಲ್ಲ. ಈ ಮಧ್ಯೆ ಮೂರು ದಿನಗಳ ಹಿಂದೆ ಗ್ರಾಪಂ ಸಿಬ್ಬಂದಿ ಏಕಾಏಕಿಯಾಗಿ ಈ ಕುಟುಂಬಗಳ ಮನೆಗೆ ಕುಡಿಯುವ ನಳ್ಳಿ ನೀರಿನ ಸಂಪರ್ಕವನ್ನು ಕಾನೂನು ಬಾಹಿರವಾಗಿ ಕಡಿತಗೊಳಿಸಿ ದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಇದರಿಂದ ಕುಟುಂಬಗಳು ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಮೂಲಭೂತ ಸೌಕರ್ಯಗಳಲ್ಲೊಂದಾದ ಕುಡಿಯುವ ನೀರನ್ನು ಅರ್ಹ ಗ್ರಾಮಸ್ಥರಿಗೆ ಕಡ್ಡಾಯವಾಗಿ ಒದಗಿಸುವುದು ಸ್ಥಳೀಯ ಗ್ರಾಪಂನ ಜವಾಬ್ದಾರಿ ಯಾಗಿದೆ. ಆದುದರಿಂದ ತಕ್ಷಣವೇ ಎಲ್ಲ ಪರಿಶಿಷ್ಠ ಕುಟುಂಬಗಳಿಗೆ ಕಡಿತ ಗೊಳಿಸಿರುವ ನಳ್ಳಿ ನೀರಿನ ಸಂಪರ್ಕವನ್ನು ಕೂಡಲೇ ಒದಗಿಸಬೇಕು ಎಂದು ನಿಯೋಗ ಮನವಿಯಲ್ಲಿ ಆಗ್ರಹಿಸಿದೆ.
ಸಮಿತಿಯ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಸಾಲಿ ಯಾನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಮಹಿಳಾ ಘಟಕದ ಅಧ್ಯಕ್ಷೆ ಪ್ರಮೋದಿನಿ ಹಂದಾಡಿ ಮೊದಲಾದವರು ಉಪಸ್ಥಿತರಿದ್ದರು.