ಶಿಕ್ಷಣ, ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಅಗತ್ಯ: ಪದ್ಮಶ್ರೀ ಮಂಜಮ್ಮ ಜೋಗತಿ
ಉಡುಪಿ, ಸೆ.4: ತೃತೀಯ ಲಿಂಗಿಗಳು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯವಾಗುವಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡ ಬೇಕಾಗಿದೆ. ಇಲ್ಲದಿದ್ದರೆ ಅವರನ್ನು ಸಮಾಜದಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತದೆ. ಇದರಿಂದ ಅವರು ಅವಕಾಶಗಳಿಂದ ವಂಚಿತರಾಗುತ್ತಾರೆ ಎಂದು ಪದ್ಮಶ್ರೀ ಡಾ.ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ, ವಿದ್ಯಾ ವಾಚಾಸ್ಪತಿ ಡಾ.ಬನ್ನಂಜೆ ಗೋವಿಂದಾ ಚಾರ್ಯ ಸ್ಮಾರಕ ಜಿಲ್ಲಾ ಗ್ರಂಥಾಲಯ ಉಡುಪಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಜಿಲ್ಲಾ ಕೇಂದ್ರ ಗ್ರಂಥಾಲಯ ದಲ್ಲಿ ಸೋಮವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಬಾಲ್ಯದಲ್ಲಿ ನಾನು ಪ್ರತ್ಯೇಕತೆ, ಸಾರ್ವಜನಿಕ ಸ್ಥಳಗಳಲ್ಲಿ ಜನರಿಂದ ಸಾಕಷ್ಟು ನಿರ್ಲಕ್ಷ್ಯವನ್ನು ಎದುರಿಸಿದ್ದೇನೆ. ಬಸ್ಸುಗಳಲ್ಲಿ ಪ್ರಯಾಣಿಸುವಾಗಲೂ ಜನ ನಮ್ಮನ್ನು ಅಸ್ಪಶ್ಯರಂತೆ ನೋಡುತ್ತಾರೆ. ನಾನು ಪದ್ಮಶ್ರೀ ಪ್ರಶಸ್ತಿ ಪಡೆದ ನಂತರ ಜನರು ನನ್ನನ್ನು ನೋಡುವ ದೃಷ್ಟಿಕೋನ ಬದಲಾಯಿಸಿದ್ದಾರೆ. ತೃತೀಯ ಲಿಂಗಿ ಮಕ್ಕಳನ್ನು ದೂರ ಮಾಡುವ ಅಮಾನವೀಯ ಪದ್ಧತಿ ಈ ಸಮಾಜದಲ್ಲಿ ನಿಲ್ಲಬೇಕು ಎಂದರು.
ಹಿಂದೂ ಪುರಾಣಗಳು ತೃತೀಯ ಲಿಂಗಿಗಳಿಗೆ ಇತರ ಲಿಂಗಗಳಿಗೆ ಸಮಾನ ವಾದ ಸ್ಥಾನಮಾನವನ್ನು ನೀಡಲಾಗುತ್ತಿತ್ತು. ಅದೇ ರೀತಿ ಈಗಿನ ಸಮಾಜ ದಲ್ಲಿಯೂ ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಯಬೇಕು. ಮನೆಗಳಲ್ಲಿ ತಂದೆತಾಯಂದಿರು ಈ ರೀತಿಯ ಮಕ್ಕಳ ಬಗ್ಗೆ ಕಾಳಜಿ ತೋರಿಸಿ ಉತ್ತಮ ಶಿಕ್ಷಣ ನೀಡುವ ಕಾರ್ಯ ಮಾಡಬೇಕು. ಇದರಿಂದ ಸಮಾಜದ ದೃಷ್ಠಿ ಕೋನ ಬದಲಾಯಿಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಸಂವಾದದಲ್ಲಿ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಕವಯತ್ರಿ ಜ್ಯೋತಿ ಮಹಾದೇವ್, ಕಲಾವಿದ ಡಾ.ಸುರೇಶ್ ಶೆಣೈ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಪಾಲ್ಗೊಂಡಿದ್ದರು. ಮುಖ್ಯ ಗ್ರಂಥಾಲಯ ಅಧಿಕಾರಿ ಜಯಶ್ರೀ ಎಂ., ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಉಡುಪಿ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರೀಶ್ಚಂದ್ರ ಉಪಸ್ಥಿತರಿದ್ದರು.
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿ ದರು. ಸಂವಾದ ಕಾರ್ಯಕ್ರಮವನ್ನು ಅವಿನಾಶ್ ಕಾಮತ್ ನಿರ್ವಹಿಸಿದರು. ಸಂದ್ಯಾ ಶೆಣೈ ವಂದಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.