ಉಡುಪಿಯಲ್ಲಿ ರಾಯಣ್ಣನ ಪ್ರತಿಮೆ ಸಹಿತ ವೃತ್ತ ನಿರ್ಮಾಣಕ್ಕೆ ಸಂಕಲ್ಪ: ಶ್ರೀಮಹಾಂತಯ್ಯ ಸ್ವಾಮೀಜಿ
ಉಡುಪಿ, ಆ.27: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಂಗೊಳ್ಳಿ ರಾಯಣ್ಣ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. 228ನೇ ಜಯಂತಿಯೊಳಗೆ ಉಡುಪಿ ನಗರದಲ್ಲಿ ಯಾವುದಾದರೊಂದು ಕಡೆಯಲ್ಲಿ ರಾಯಣ್ಣನ ಪ್ರತಿಮೆ ಸಹಿತ ವೃತ್ತ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪಮಾಡಬೇಕು ಎಂದು ಬೈಲ ಹೊಂಗಲದ ದುರ್ಗಾದೇವಿ ದೇವಸ್ಥಾನದ ಧರ್ಮದರ್ಶಿ ಶ್ರೀಮಹಾಂತಯ್ಯ ಸ್ವಾಮೀಜಿ ಹೇಳಿದ್ದಾರೆ.
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವಾನಿ ಬಳಗ ಉಡುಪಿ ಮತ್ತು ದ.ಕ.ಜಿಲ್ಲೆಯ ವತಿಯಿಂದ ರವಿವಾರ ಬನ್ನಂಜೆ ಶ್ರೀನಾರಾಯಣ ಗುರು ಅಡಿಟೋರಿಯಂನಲ್ಲಿ ನಡೆದ 227ನೇ ರಾಯಣ್ಣ ಉತ್ಸವವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪ್ರತೀ ಮನೆಯಲ್ಲೂ ರಾಯಣ್ಣನಂಥ ವೀರರು ಹುಟ್ಟಿ ಬರಬೇಕು. ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುವ ಮೂಲಕ ಕನ್ನಡ ತಾಯಿಯ ಋಣ ತೀರಿಸಬೇಕು. ಮಕ್ಕಳನ್ನು ಸೈನ್ಯಕ್ಕೆೆ ಸೇರಲು, ರೈತನಾಗಲು ಪ್ರೇರೇಪಿಸಬೇಕು ಎಂದರು.
ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಜನಾರ್ದನ್ ಕೊಡವೂರು ಪ್ರಾಸ್ತಾವಿಕವಾಗಿ ಮಾತ ನಾಡಿದರು. ನಗರಸಭೆ ಸದಸ್ಯ ವಿಜಯ ಕೊಡವೂರು ದಿಕ್ಸೂಚಿ ಭಾಷಣ ಮಾಡಿದರು.
ತ್ರಿಷಿಕಾ ಹಿಂದುಳಿದ ಮಹಿಳಾ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷೆೆ ಭಾಗ್ಯಶ್ರೀ ಬಾಬಣ್ಣ, ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಬಾಗಲಕೋಟೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಬರಮು ಪೂಜಾರಿ, ಉಡುಪಿಯ ಕನಕದಾಸ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತ ಡೊಳ್ಳಿನ, ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಹನುಮಂತ ಜಿ.ಗೋಡಿ, ಪ್ರಮುಖರಾದ ಶಿವಾನಂದ ಕೋಳ್ಕರ್, ರಾಜು ಬೋಳನ್ನವರ್ ಉಪಸ್ಥಿತರಿದ್ದರು.
ಸಮಾಜ ಸೇವಕ ಆಪತ್ಬಾಂಧವ ಈಶ್ವರ್ ಮಲ್ಪೆೆಅವರಿಗೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ‘ರಾಯಣ್ಣ ಪುರಸ್ಕಾರ’ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ರಾಯಣ್ಣ ಪ್ರತಿಮೆಗೆ ಕ್ಷಿರಾಭಿಷೇಕ ನಡೆಯಿತು. ಬನ್ನಂಜೆ ಶ್ರೀನಾರಾಯಣ ಗುರು ಅಡಿಟೋರಿಯಂನಿಂದ ಆರಂಭಗೊಂಡ ಕುಂಭ ಮೆರವಣಿಗೆಯು ರಥಬೀದಿಯ ಕನಕ ಗೋಪುರದವರೆಗೆ ನಡೆಯಿತು. ಇದರಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.