ನೆಹರೂ ಬಗ್ಗೆ ಮರು ಚಿಂತನೆ ಮಾಡುವುದು ಅತೀ ಅಗತ್ಯ: ಇರ್ವತ್ತೂರು
ಉಡುಪಿ : ದೇಶ ಕಟ್ಟಿದವರನ್ನು ಕುಟ್ಟುವ ವರ್ಗಗಳು ಇಂದು ಹುಟ್ಟಿಕೊಂಡಿವೆ. ಇಂತಹ ಸಂದರ್ಭದಲ್ಲಿ ಬಹಳ ಸ್ಪಷ್ಟತೆ ಹಾಗೂ ದೇಶದ ಬಗ್ಗೆ ಕನಸು ಕಂಡ ನೆಹರೂ ಅವರ ಬಗ್ಗೆ ಮರು ಚಿಂತನೆ ಮಾಡಬೇಕಾಗಿರುವುದು ಅತೀಅಗತ್ಯವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಉದಯ ಕುಮಾರ್ ಇರ್ವತ್ತೂರು ಹೇಳಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ರವಿವಾರ ನೆಹರೂ ಜಯಂತಿ ಪ್ರಯುಕ್ತ ಮಕ್ಕಳ ನಾಟಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆರ್ಥಿಕ ನೀತಿ ಮತ್ತು ಆಧುನಿಕತೆ ಕುರಿತ ನೆಹರೂ ಅವರ ಒಲವು ಅದ್ಭುತ. ಅವರು ದೇಶಕ್ಕೆ ನೀಡಿರುವ ಸೇವೆ ಅಪಾರ. ಆದರೆ ಅವರ ಬಗ್ಗೆ ಇಂದು ವಾಟ್ಸಾಪ್ ಯುನಿವರ್ಸಿಟಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಅಪಕಲ್ಪನೆಗಳನ್ನು ಬಿತ್ತಲಾಗುತ್ತಿದೆ. ಆದುದರಿಂದ ಇಂದಿನ ಮಕ್ಕಳು ಈ ದೇಶ ನಿರ್ಮಾಣ ಮಾಡಿರುವ ಗಾಂಧಿ, ನೆಹರೂ ಸೇರಿದಂತೆ ಮಹತ್ವದ ವ್ಯಕ್ತಿಗಳ ಕುರಿತು ಓದು ಮತ್ತು ಅಧ್ಯಯನ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಪೂರ್ಣಿಮಾ ಮಾತನಾ ಡಿದರು. ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯ ದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯ ಅಭಿಜ್ಞಾನ ಮಕ್ಕಳ ನಾಟಕ ಬಳಗದಿಂದ ಕಾರಂತಜ್ಜನಿಗೊಂದು ಪತ್ರ, ಕಟಪಾಡಿ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಬಾಲರಂಗ ಮಕ್ಕಳ ನಾಟಕ ಶಾಲೆಯಿಂದ ಜ್ಞಾನ ವಿಜ್ಞಾನ ಜಿಂದಾಬಾದ್ ಮತ್ತು ಕಿನ್ನರ ಮೇಳ ತುಮುರಿ ಅವರಿಂದ ಆನ್ಯಾಳ ಡೈರಿ ನಾಟಕ ಪ್ರದರ್ಶನಗೊಂಡಿತು.