ಸಂಸ್ಕೃತ ದಿನಾಚರಣೆಯನ್ನು ಪ್ರತಿನಿತ್ಯ ಆಚರಿಸಬೇಕು: ಅದಮಾರುಶ್ರೀ
ಉಡುಪಿ, ಸೆ.26: ಅಕ್ಕಿಯನ್ನು ಸಂಸ್ಕರಿಸಿದರೆ ಅನ್ನ ಎಂಬ ಹೆಸರಿನಿಂದ ಕರೆಯುವರು. ಹತ್ತಿಯನ್ನು ಸಂಸ್ಕರಿಸಿದಾಗ ಬಟ್ಟೆಯಾಗುವುದು.ಆದರೆ ಯಾವ ಒಂದು ಭಾಷೆಯು ಸರಿಯಾಗಿ ಸಂಸ್ಕರಿಸಲ್ಪಟ್ಟಾಗ ಈ ಭಾಷೆ ‘ಸಂಸ್ಕರಿತವಾಗಿದೆ’ ಎಂಬ ಅರ್ಥದಲ್ಲಿ ‘ಸಂಸ್ಕೃತ’ ಎಂಬ ಪದದಿಂದ ಹೇಳಲ್ಲಡುವುದೋ ಅದೇ ಸಂಸ್ಕೃತ ಭಾಷೆ ಎಂದು ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥರು ಹೇಳಿದ್ದಾರೆ.
ನಗರದ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿ ಅವರು ಮಾತನಾಡುತಿದ್ದರು.
ನಾವು ಸುಸಂಸ್ಕೃತರಾಗಿ ಶಾಶ್ವತವಾದ ಈ ಭಾಷೆಯನ್ನು ಅಧ್ಯಯನ ಮಾಡಿದರೆ ವಿಕಾರರಹಿತ, ರೋಗ ರಹಿತ ಜೀವನ ನಡೆಸಲು ಸಾಧ್ಯ. ಹೀಗಾಗಿ ಎಲ್ಲರೂ ಸಂಸ್ಕೃತ ಅಧ್ಯಯನ ಮಾಡಿ ಪ್ರತಿದಿನವೂ ಸಂಸ್ಕೃತ ದಿನವನ್ನಾಚರಿಸಿ ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನ ಉಪಪ್ರಾಚಾರ್ಯ ವಿದ್ವಾನ್ ಹೆರ್ಗ ಹರಿಪ್ರಸಾದ್ ಭಟ್ ಮಾತನಾಡಿ, ಸಂಸ್ಕೃತ ಭಾಷೆಯ ಸೊಬಗನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.
ಇದೇ ಸಂದರ್ಭದಲ್ಲಿ ಮಂಗಳೂರು ವಿವಿ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ಅತ್ಯಧಿಕ ಅಂಕಗಳಿಸಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಕರ್ನಾಟಕ ಸಂಸ್ಕೃತ ವಿವಿಯ ಅಧೀನದಲ್ಲಿರುವ ಸಂಸ್ಕೃತ ನಿರ್ದೇಶನಾಲಯದವರು ನಡೆಸಿದ ಕಾವ್ಯ ಪರೀಕ್ಷೆ ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು. ಸಂಸ್ಕೃತ ವಿದ್ಯಾರ್ಥಿಗಳಿಂದ ಸಂಸ್ಕೃತ ಗೀತಗಾಯನ ನಡೆಯಿತು.
ಕಾಲೇಜಿನ ಪ್ರಾಚಾರ್ಯರಾದ ಡಾ. ರಾಮು ಎಲ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ್ ಟಿ.ಎ. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಅನುಷಾ ಸಿ.ಎಚ್. ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ನಿಖಿತಾ ಪೆಜತ್ತಾಯ ವಂದಿಸಿದರು.