ಕಾಪು: ಜಮೀಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ, ವೈದ್ಯಕೀಯ ಚಿಕಿತ್ಸಾ ವೆಚ್ಚ ವಿತರಣೆ
ಕಾಪು: ಜಮೀಯತುಲ್ ಫಲಾಹ್ ಸಂಸ್ಥೆಯು ಕಾಪು ತಾಲೂಕಿನ ಪ್ರಥಮ ಪಿ.ಯು.ಸಿ.ಯಲ್ಲಿ ಅಧ್ಯಯನ ಮಾಡುವ, ಝಕಾತ್ ಹಣ ಪಡೆಯಲು ಅರ್ಹರಾಗಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿಗಳನ್ನು ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಐವತ್ತು ಸಾವಿರ ರೂಪಾಯಿಗಳ ವೈದ್ಯಕೀಯ ನೆರವು ನೀಡುವ ಕಾರ್ಯಕ್ರಮವನ್ನು ಕಾಪು ತಾಲೂಕಿನ ಸಂಸ್ಥೆಯ ಕಚೇರಿಯಲ್ಲಿ ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಲ್ ಹಾಜ್ ಅಬ್ದುಲ್ ಜಲೀಲ್ ಸಾಹೇಬ್ ಉದ್ಯಾವರ ಭಾಗವಹಿಸಿ, ಬಡ ಮಕ್ಕಳಿಗೆ ವಿದ್ಯಾಭ್ಯಾಸ ಪಡೆಯಲು ಕಷ್ಟ ಆಗಬಾರದೆನ್ನುವ ದೃಷ್ಟಿಯಲ್ಲಿ ಜಮೀಯತುಲ್ ಫಲಾಹ್ ನಿರ್ವಹಿಸುವ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಜಮೀಯತುಲ್ ಫಲಾಹ್ ಸಂಸ್ಥೆಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಶಬೀಹ್ ಅಹಮದ್ ಕಾಝಿ ಅವರು ವಹಿಸಿ, ಈ ಸಂಸ್ಥೆಯು ಇಂತಹ ಕಾರ್ಯಕ್ರಮವನ್ನು ದ್ವಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಾಕಿಕೊಂಡು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಇದರಿಂದ ಪ್ರಯೋಜನ ಪಡೆದ ಹಲವು ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಡಾಕ್ಟರ್, ಇಂಜಿನಿಯರ್ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾವುಗಳು ಕೂಡಾ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವವರು ಆಗಬೇಕೆಂದು ಹೇಳಿದರು.
ಕಾರ್ಯಕ್ರಮವು ಕುದ್ದೂಸ್ ಮೌಲಾನರವರ ಕುರ್ ಆನ್ ಪಠನದೊಂದಿಗೆ ಪ್ರಾರಂಭವಾಯಿತು. ತಾಲೂಕು ಅಧ್ಯಕ್ಷರು ಮುಹಮ್ಮದ್ ಇಕ್ಬಾಲ್ ಸಾಹೇಬ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ನಸೀರ್ ಅಹಮದ್ (ಎಕ್ಕಾವನ್ ) ವಂದಿಸಿದರು. ಮಾಧ್ಯಮ ಕಾರ್ಯದರ್ಶಿ ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಾಬೀರ್ ಅಲಿ ಎರ್ಮಾಲ್ ಪಟ್ಟಿ ವಾಚಿಸಿದರು. ಸಂಸ್ಥೆಯ ಉಪಾಧ್ಯಕ್ಷ ಅಷ್ಪಾಕ್ ಅಹಮದ್, ಮುಸ್ತಾಕ್ ಇಬ್ರಾಹೀಮ್, ಸಿರಾಜ್ ಅಹಮದ್ ಕಾಝಿ, ಬಷೀರ್ ಅಹಮದ್, ಮುಹಮ್ಮದ್ ಸಾದಿಕ್ (ದಿನಾರ್ ) ನಝೀರ್ ಅಹಮದ್, ಇಬ್ರಾಹೀಮ್ ಪೈಲ್ವಾನ್, ಶಬ್ಬೀರ್ ಸಾಹೇಬ್ ಪಡುಬಿದ್ರಿ, ಶೇಕ್ ಸನಾವರ್ ಹಾಗೂ ಕಚೇರಿ ಸಿಬ್ಬಂದಿ ಸೋನಿ ಉಪಸ್ಥಿತರಿದ್ದರು.