ಪ್ರತ್ಯೇಕ 3 ಆನ್‌ಲೈನ್ ವಂಚನೆ ಪ್ರಕರಣ: 8.68 ಲಕ್ಷ ರೂ. ಮೋಸ
ಉಡುಪಿ, ಸೆ.24: ಜಿಲ್ಲೆಯಲ್ಲಿ ವರದಿಯಾಗಿರುವ ಮೂರು ಪ್ರತ್ಯೇಕ ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಒಟ್ಟು 8.68ಲಕ್ಷ ರೂ. ಮೋಸ ಮಾಡಿರುವ ಬಗ್ಗೆ ವರದಿಯಾಗಿದೆ.
ಆ.2ರಂದು ಟೆಲಿಗ್ರಾಮ್ ಆ್ಯಪ್‌ನಲ್ಲಿ ಅಪರಿಚಿತ ವ್ಯಕ್ತಿ ತಾನು ಕಂಪೆನಿ ಯೊಂದರ ಅಧಿಕಾರಿ ಎಂದು ಹೇಳಿಕೊಂಡು ರೇಣುಕಾ ಎಂಬವರಿಗೆ ಸಂದೇಶ ಕಳುಹಿಸಿದ್ದು,, ಈ ಕಂಪೆನಿಯಲ್ಲಿ ಹಣ ತೊಡಗಿಸಿದರೆ, ಹೆಚ್ಚಿನ ಲಾಭಾಂಶದ ಹಣ ನೀಡುವುದಾಗಿ ನಂಬಿಸಿದ್ದನು. ಅದನ್ನು ನಂಬಿದ ರೇಣುಕಾ, ಒಟ್ಟು 1,35,000ರೂ. ಹಣವನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮುಖೇನ ಜಮೆ ಮಾಡಿ ಮೋಸ ಹೋಗಿದ್ದಾರೆ.
ಆ.23ರಂದು ಪ್ರಶಾಂತ ಎಂಬವರು ಎ.ಟಿ.ಎಂ.ನಲ್ಲಿ ಹಣ ಬಾರದೇ ಇದ್ದುದರಿಂದ ಕಸ್ಟಮರ್ ಕೇರ್ ನಂಬರ್ ಎಂದು ಮೊಬೈಲ್‌ವೊಂದಕ್ಕೆ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ತಾನು ಎ.ಟಿ.ಎಂ. ಸಿಬ್ಬಂದಿ ಎಂದು ಹೇಳಿ, ಪ್ರಶಾಂತ್ ಅವರ ಕಾರ್ಡ್ ವಿವರ ಪಡೆದು, ಒಟ್ಟು 3,95,000ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ, ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಎರಡೂ ಪ್ರಕರಣಗಳು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಕಾಪು: ಕೆವೈಸಿ ಅಪ್‌ಡೇಟ್ ಮಾಡುವಂತೆ ಹೇಳಿ ವಲೆರಿಯನ್ ಎಂಬವರಿಗೆ ಸಂದೇಶ ಬಂದಿದ್ದು, ಅದನ್ನು ನಂಬಿದ ಅವರು ತನ್ನ ಎಟಿಎಂ ಕಾರ್ಡ್ ನಂಬರ್ ಮತ್ತು ಬಳಿಕ ಬಂದ ಓಟಿಪಿ ನಂಬರ್ ಕೂಡ ನೀಡಿದ್ದರು. ಅದರಂತೆ ದುಷ್ಕರ್ಮಿಗಳು ಇವರ ಖಾತೆಯಿಂದ ಒಟ್ಟು 3,38,199ರೂ. ಹಣವನ್ನು ಕಡಿತ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.