ಶಿರ್ವ: ಬಾಕಿ 10 ರೂ.ಗಾಗಿ ಗ್ರಾಹಕನಿಂದ ಅಂಗಡಿಯಲ್ಲಿ ದಾಂಧಲೆ: 7 ಸಾವಿರ ರೂ. ನಷ್ಟ
ಶಿರ್ವ, ಅ.17: ತಂಬಾಕು ಖರೀದಿಸಿದ ಗ್ರಾಹಕ ತನಗೆ ಚಿಲ್ಲರೆ 10 ರೂ. ಕೊಡಲು ಬಾಕಿ ಇದೆ ಎಂದು ಹೇಳಿ ಅಂಗಡಿ ಮಾಲಕನಿಗೆ ಹಲ್ಲೆಗೈದು ದಾಂಧಲೆ ನಡೆಸಿ ಸಾವಿರಾರೂ ರೂ. ನಷ್ಟ ಉಂಟು ಮಾಡಿರುವ ಘಟನೆ ಕಟ್ಟಿಂಗೇರಿ ಗ್ರಾಮದ ನಾಲ್ಕುಬೀದಿ ಎಂಬಲ್ಲಿ ನಡೆದಿದೆ.
ಹಲ್ಲೆಯಿಂದ ಗಾಯಗೊಂಡಿರುವ ಅಂಗಡಿ ಮಾಲಕ ಮೂಡುಬೆಳ್ಳೆಯ ರಾಜೇಶ್(36) ಎಂಬವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಾಲ್ಕುಬೀದಿಯಲ್ಲಿರುವ ರಾಜೇಶ್ ಅವರ ಅಂಗಡಿಗೆ ಅ.15ರಂದು ರಾತ್ರಿ ದೀಕ್ಷಿತ್ ಎಂಬಾತ ಬಂದು ತಂಬಾಕು ಖರೀದಿಸಿದ್ದನು. ನಂತರ ದೀಕ್ಷಿತ್ ತನಗೆ 10 ರೂ. ನೀಡಲು ಬಾಕಿಯಿದೆ ಎಂದು ಅಂಗಡಿ ಅವರಲ್ಲಿ ಕೇಳಿದ್ದನು.
ಈ ವಿಚಾರವಾಗಿ ವಾಗ್ವಾದ ನಡೆದು ದೀಕ್ಷಿತ್ ಅಂಗಡಿಯೊಳಗೆ ಅಕ್ರಮ ಪ್ರವೇಶಿಸಿ ಗಲಾಟೆ ಮಾಡಿ ರಾಜೇಶ್ ರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಅಂಗಡಿಯಲ್ಲಿನ ಆಹಾರ ಪದಾರ್ಥಗಳನ್ನು ಎತ್ತಿ ಬಿಸಾಡಿ ಸುಮಾರು 7000 ರೂ. ನಷ್ಟವನ್ನುಂಟು ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.