ಸಾಮಾಜಿಕ ಸ್ಪಂದನೆ ಸುದ್ದಿಗಳತ್ತ ಮಾಧ್ಯಮಗಳ ಗಮನ ಅಗತ್ಯ: ಎಸಿ ರಶ್ಮೀ
ಕುಂದಾಪುರ, ಜು.21: ಸತ್ಯಶೋಧನೆ, ಸಾಮಾಜಿಕ ಸ್ಪಂದನೆ ಸೇರಿದಂತೆ ಜನರಿಗೆ ಅವಶ್ಯವುಳ್ಳ ಸುದ್ದಿಗಳ ಕಡೆಗೆ ಮಾಧ್ಯಮ ಗಮನ ಹರಿಸಿದರೆ ಸಮಾಜ ಹಾಗೂ ಮಾಧ್ಯಮದ ಬಾಂಧವ್ಯ ಉಳಿಯುತ್ತದೆ. ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಜನ ನಂಬುತ್ತಾರೆ ಎಂದು ಕುಂದಾಪುರ ಉಪವಿಭಾಗ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಹೇಳಿದ್ದಾರೆ.
ಅವರು ಶುಕ್ರವಾರ ಭಂಡಾರ್ಕಾರ್ಸ್ ಕಾಲೇಜಿನ ಕೋಯಾಕುಟ್ಟಿ ಹಾಲ್ನಲ್ಲಿ ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಫೇಸ್ಬುಕ್, ಯೂಟ್ಯೂಬ್ ಸಾಮಾಜಿಕ ಜಾಲತಾಣ ಅನಾವರಣಗೊಳಿಸಿದ ಕುಂದಾಪುರ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ಮಾತನಾಡಿ, ಪತ್ರಕರ್ತರು ಹಾಗೂ ಪೊಲೀಸರು ಸಮಾಜದಲ್ಲಿ ಜೊತೆಯಾಗಿ ಕೆಲಸ ಮಾಡಬೇಕಾಗುತ್ತದೆ. ಆಗ ಸಂಘರ್ಷಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಯು.ಕೆ.ಕುಮಾರನಾಥ್ ಉಪನ್ಯಾಸ ನೀಡಿ, ಅಭಿಯಾನ ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೇವಲ ವರದಿ ಗಾರಿಕೆ ಯಷ್ಟೇ ಪತ್ರಿಕೆಯ ಕೆಲಸವಾಗದೆ. ಸಮಾಜದಲ್ಲಿ ಪರಿವರ್ತನೆ ತರುವ ಕೆಲಸವಾಗಬೇಕು ಎಂದರು.
ಹಿರಿಯ ಪತ್ರಕರ್ತ ಜನಾರ್ದನ ಎಸ್.ಮರವಂತೆ ಮಾತನಾಡಿ, ಪತ್ರಿಕೆಗಳ ನಿಷ್ಪಕ್ಷಪಾತ ವರದಿಗಾರಿಕೆ ಕುರಿತು ನೀಡುವ ಜಾಗತಿಕ ರ್ಯಾಂಕಿಂಗ್‌ನಲ್ಲಿ ಭಾರತ 180ರಲ್ಲಿ 161 ಸ್ಥಾನದಲ್ಲಿದೆ. ಇದು ಸಮಾಜದ ಮೇಲೆ ವಿಭಜಿಸುವ ಪರಿಣಾಮ ಬೀರದೇ ಇರಲಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಂಡಾರ್‌ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಜಿಲ್ಲಾ ರಜತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಜಿಲ್ಲಾ ಸಂಘದ ಉಪಾಧ್ಯಕ್ಷ ವಿನಯ ಪಾಯಸ್ ಉಪಸ್ಥಿತರಿದ್ದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶಶಿಧರ ಹೆಮ್ಮಾಡಿ ಸ್ವಾಗತಿಸಿದರು. ಕಾರ್ಯಕಾರಿ ಮಂಡಳಿ ಸದಸ್ಯ ಶ್ರೀಕಾಂತ ಹೆಮ್ಮಾಡಿ ನಿರ್ವಹಿಸಿ, ಸಂಘದ ಪದಾಧಿಕಾರಿಗಳ ಪಟ್ಟಿಯನ್ನು ಸದಸ್ಯ ಪ್ರಶಾಂತ್ ಪಾದೆ ವಾಚಿಸಿದರು. ಭಂಡಾರ್‌ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಜಾಡಿ ವಂದಿಸಿದರು.