ನಗರಸಭೆ ಸೇವೆಯಲ್ಲಿ ಹಿರಿಯ ನಾಗರಿಕರಿಗೆ ವಿಶೇಷ ಆದ್ಯತೆ: ಶಾಸಕ ಯಶ್‌ಪಾಲ್ ಸುವರ್ಣ
ಉಡುಪಿ, ಜು.22: ಉಡುಪಿ ನಗರಸಭೆ ಮತ್ತು ತಾಲೂಕು ಕಚೇರಿಗಳಲ್ಲಿ ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 15 ದಿನಗಳಿಗೊಮ್ಮೆ ವಿಶೇಷ ಆದ್ಯತೆಯಲ್ಲಿ ತೆರಿಗೆ ಪಾವತಿ ಸೇರಿದಂತೆ ವಿವಿಧ ಸೇವೆಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ವತಿಯಿಂದ ಅಜ್ಜರಕಾಡು ಪುರಭವನದ ಮಿನಿಹಾಲ್‌ನಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ನಗರದ ಒಳಚರಂಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಲಾಗುತ್ತಿದ್ದು, ಮುಂದಿನ 50ವರ್ಷಗಳ ದೃಷ್ಟಿಕೋನ ಇಟ್ಟುಕೊಂಡು ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ. ಇದಕ್ಕಾಗಿ 350ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ ಎಂದರು.
ಮುಂದೆ ಎಲ್ಲ ಇಲಾಖೆಗಳ ಅಧಿಕಾರಿಗಳ ಜೊತೆ ಸೇರಿಕೊಂಡು ಹಿರಿಯ ನಾಗರಿಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ, ಅವರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಅಥವಾ ಅಧಿಕಾರಿಗಳಿಗೆ ಸೂಚನೆ ನೀಡುವ ಕಾರ್ಯ ಮಾಡ ಲಾಗುವುದು. ಈ ಮೂಲಕ ಹಿರಿಯ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.
ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇತುವೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸ ಬಗ್ಗೆ ಸಂಸದರ ಗಮನ ಸೆಳೆಯಲಾಗಿದೆ. ವಂದೇ ಭಾರತ್ ರೈಲನ್ನು ಕೊಂಕಣ ರೈಲ್ವೆ ಮಾರ್ಗದಲ್ಲಿ ಓಡಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಅದೇ ರೀತಿ ನಗರದ ದಾರಿದೀಪ ಸಮಸ್ಯೆ, ಬಸ್ ಸಂಚಾರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ನಗರಸಭೆ ಸದಸ್ಯೆ ರಶ್ಮಿ ಸಿ.ಭಟ್, ಸಂಸ್ಥೆಯ ಗೌರವಾಧ್ಯಕ್ಷ ವಿಶ್ವನಾಥ ಹೆಗ್ಡೆ ಉಪಸ್ಥಿತರಿದ್ದರು. ಸಂವಾದದಲ್ಲಿ ಎ.ಪಿ.ಕೊಡಂಚ, ರಾಮಕೃಷ್ಣ ಕಾಮತ್, ಪದ್ಮ ಕಿಣಿ, ಗಣೇಶ್ ರಾವ್, ಸೀತಾರಾಮ ತಂತ್ರಿ, ಹರಿದಾಸ್ ನಾಯಕ್ ಪಾಲ್ಗೊಂಡರು. ಸಂಸ್ಥೆಯ ಅಧ್ಯಕ್ಷ ನಾಗರಾಜ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಮುರಳೀಧರ್ ಕಾರ್ಯಕ್ರಮ ನಿರೂಪಿಸಿದರು.