ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ‘ವಿಕಸನ’ -‘ಉನ್ನತಿ’ ಶಿಬಿರ
ಉಡುಪಿ, ಅ.5: ಸಿದ್ಧಾಂತ್ ಫೌಂಡೇಶನ್ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ‘ವಿಕಸನ’ ಮತ್ತು ‘ಉನ್ನತಿ’ ಉಚಿತ ರಜಾ ಶಿಬಿರವನ್ನು ಕಟಪಾಡಿಯ ಎಸ್‌ವಿಎಸ್ ಕನ್ನಡ ಮಾಧ್ಯಮ ಶಾಲೆ ಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಸಿಎ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ಸಿಎ ಗೋಪಾಲಕೃಷ್ಣ ಭಟ್, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅ.9ರಿಂದ 15ರವರೆಗೆ ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ವಿಕಸನ ಶಿಬಿರ ಮತ್ತು 9, 10, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಅ.16ರಿಂದ 19ರವರೆಗೆ ಉನ್ನತಿ ಶಿಬಿರ ನಡೆಯಲಿದೆ ಎಂದರು.
ಈ ಶಿಬಿರ ಸಂಪೂರ್ಣ ಉಚಿತವಾಗಿದ್ದು, ಪಠ್ಯ ಮತ್ತು ಪಠ್ಯೇತರ ವಿಷಯ ಗಳ ಕುರಿತು ರಾಜ್ಯದ ನುರಿತ ಸಂಪನ್ಮೂಲ ವ್ಯಕ್ತಿಗಳು ಆಟ, ಹಾಡು, ನಾಟಕ, ಚಿತ್ರಕಲೆ, ಕರಕುಶಲ ತರಬೇತಿ, ಮಾತುಗಾರಿಕೆ, ನಿರೂಪಣೆ, ಕ್ಲೇ ಮಾಡಲಿಂಗ್, ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನಡೆಸಿ ಕೊಡಲಿದ್ದಾರೆ. ಅದೇ ರೀತಿ ಚಾರಣ ಬೀಚ್ ಗೇಮ್ ಕೂಡ ಇರುತ್ತದೆ. ಇಲ್ಲಿ ವಿದ್ಯಾರ್ಥಿ ಗಳಿಗೆ ವಸತಿ ವ್ಯವಸ್ಥೆ ಕೂಡ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್- 9738529738ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರೊ.ಗುರುಪ್ರಸಾದ್ ರಾವ್, ಧೀರಜ್ ಬೆಳ್ಳಾರೆ ಉಪಸ್ಥಿತರಿದ್ದರು.