ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ನಿರ್ವಾಹಕರು ಕ್ಲೀನರ್‌ಗಳಿಗೆ ಪರಿಹಾರ: ನೋಂದಣಿಗೆ ಅವಕಾಶ
ಉಡುಪಿ : ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ನಿರಂತರವಾಗಿ ಅಪಘಾತಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಿದ್ದು, ಇಂತಹ ಕಾರ್ಮಿಕರು ಅಪಘಾತಕ್ಕೀಡಾಗಿ ಮರಣಕ್ಕೆ ತುತ್ತಾಗುವ, ಶಾಶ್ವತ ದುರ್ಬಲತೆ ಅಥವಾ ತಾತ್ಕಾಲಿಕ ದುರ್ಬಲತೆ ಹೊಂದಿದ ಸಂದರ್ಭದಲ್ಲಿ, ಅವರ ದುಡಿಮೆಯನ್ನೇ ಅವಲಂಬಿಸಿರುವ ಅವರ ಕುಟುಂಬವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತದೆ.
ಅಪಘಾತದಿಂದಾಗಿ ಸಂಕಷ್ಟಕ್ಕೆ ಸಿಲುಕುವ ಚಾಲಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ನೆರವು ನೀಡಲು ರಾಜ್ಯ ಸರಕಾರ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯನ್ನು ಅನುಷ್ಠಾನ ಗೊಳಿಸಿದ್ದು, ಈ ಯೋಜನೆಯಡಿ ಚಾಲಕರೊಂದಿಗೆ ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೂ ಸಹ ಅಪಘಾತ ವಿಮಾ ಸೌಲಭ್ಯವನ್ನು ವಿಸ್ತರಿಸಿ ಪರಿಷ್ಕೃತ ಕರ್ನಾಟಕ ರಾಜ್ಯ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಯನ್ನು ಜಾರಿಗೆ ತಂದಿದೆ.
ಸಾರಿಗೆ ಇಲಾಖೆಯಿಂದ ರಾಜ್ಯದಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ವಾಹನ ಚಾಲನಾ ಪರವಾನಗಿ ಪಡೆದ ಚಾಲಕರು ತಕ್ಷಣ ದಿಂದ ಫಲಾನುಭವಿಯೆಂದು ಪರಿಗಣಿಸಲಾಗುತ್ತದೆ. ನಿರ್ವಾಹಕರು ಹಾಗೂ ಕ್ಲೀನರ್‌ಗಳು ಯೋಜನೆಯಡಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ನೋಂದಣಾಧಿಕಾರಿಗಳನ್ನು ಸಂಪರ್ಕಿಸಿ, ಇತ್ತೀಚಿನ ಎರಡು ಭಾವಚಿತ್ರ ಮತ್ತು ಸ್ಟಾಂಪ್‌ಸೈಜ್ ಒಂದು ಭಾವಚಿತ್ರ, ವಿಳಾಸದ ಪುರಾವೆ (ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ), ವಯಸ್ಸಿನ ದೃಢೀಕರಣ ಪತ್ರ (ಆಧಾರ ಕಾರ್ಡ್/ಎಸೆಸೆಲ್ಸಿ ಅಂಕಪಟ್ಟಿ/ಪಾನ್ ಕಾರ್ಡ್/ನೋಂದಾಯಿತ ಎಂಬಿಬಿಎಸ್ ವೈದ್ಯರಿಂದ ವಯಸ್ಸಿನ ಪ್ರಮಾಣ ಪತ್ರ/ ಶಾಲಾ ದಾಖಲೆ/ ಡಿ.ಎಲ್/ಪಾಸ್‌ಪೋರ್ಟ್ ), ಬ್ಯಾಂಕ್ ಖಾತೆ ಪ್ರತಿ, ನಿಗದಿಪಡಿಸಿದ ಉದ್ಯೋಗ ಪ್ರಮಾಣ ಪತ್ರ, ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆ/ಮಾಲೀಕರಿಂದ ಗುರುತಿನ ಚೀಟಿ (ಲಭ್ಯವಿದ್ದಲ್ಲಿ)ಯನ್ನು ನೀಡಿ ನೋಂದಾಯಿಸಿ ಕೊಳ್ಳಬಹುದು.
ಅರ್ಜಿದಾರರು ರಾಜ್ಯದ ನಿವಾಸಿಯಾಗಿದ್ದು, ೨೦ರಿಂದ ೭೦ ವರ್ಷ ದೊಳಗಿರಬೇಕು. ನಿರ್ವಾಹಕರಿಗೆ ಸಂಬಂಧಿಸಿದಂತೆ ಮೋಟಾರ್ ವಾಹನಗಳ ಕರ್ನಾಟಕ ನಿಯಮಗಳು ೧೯೮೯ರ ಅಡಿಯಲ್ಲಿ ರಾಜ್ಯದಲ್ಲಿ ನೀಡಲಾಗಿರುವ ಊರ್ಜಿತ ನಿರ್ವಾಹ ಕರ ಪರವಾನಗಿಯನ್ನು ಸಾರಿಗೆ ಇಲಾಖೆುಂದ ಪಡೆದಿರಬೇಕು. ವಾಣಿಜ್ಯ ಸಾರಿಗೆ ವಾಹನ ಸಂಸ್ಥೆಯಲ್ಲಿ ೧೨ ತಿಂಗಳಲ್ಲಿ ೯೦ ದಿನಗಳಿಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸಿರಬೇಕು. ಒಮ್ಮೆ ನೋಂದಣಿ ಯಾದ ನಂತರ ನೀಡಲಾಗುವ ಗುರುತಿನ ಚೀಟಿ ೩ ವರ್ಷಗಳವರೆಗೆ ಊರ್ಜಿತದಲ್ಲಿರುತ್ತದೆ.
ಈ ಯೋಜನೆಯು ಕರ್ನಾಟಕ ರಾಜ್ಯದ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೆ ಅನ್ವಯಿಸುತ್ತದೆ. ಯೋಜನೆಯಡಿ ದೊರಕುವ ಅಪಘಾತ ಸೌಲಭ್ಯಗಳು ಹೀಗಿವೆ.
ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ಮರಣ ಹೊಂದಿದಲ್ಲಿ, ಅವರ ನಾಮನಿರ್ದೇಶಿತರಿಗೆ ೫ ಲಕ್ಷ ರೂ. ಪರಿಹಾರ ಹಾಗೂ ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಾಗ, ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ೨ ಲಕ್ಷ ರೂ.ವರೆಗೆ ಪರಿಹಾರ ದೊರೆಯುತ್ತದೆ.
ಅಪಘಾತಕೊಳ್ಳಗಾಗಿ ಆಸ್ಪತ್ರೆಯಲ್ಲಿ ೧೫ ದಿನಗಳಿಗಿಂತ ಕಡಿಮೆ ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಠ ೫೦,೦೦೦ ರೂ. ರವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ, ಇವುಗಳಲ್ಲಿ ಯಾವುದು ಕಡಿಮೆಯೊ ಅದನ್ನು ಹಾಗೂ ೧೫ ದಿನಗಳಿಗಿಂತ ಹೆಚ್ಚು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಠ ೧ ಲಕ್ಷ ರೂ.ವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ ಇವುಗಳಲ್ಲಿ ಯಾವುದು ಕಡಿಮೆಯೊ ಅದನ್ನು ಮರುಪಾವತಿ ಪಡೆಯಬಹುದು.
ಶೈಕ್ಷಣಿಕ ಧನ ಸಹಾಯ: ೨೦೧೮-೧೯ ನೇ ಸಾಲಿನಿಂದ ಅಪಘಾತದ ಕಾರಣ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ಪದವಿಪೂರ್ವ ವ್ಯಾಸಂಗದವರೆಗೆ ವಾರ್ಷಿಕ ೧೦,೦೦೦ ರೂ.ಗಳ ಶೈಕ್ಷಣಿಕ ಸಹಾಯಧನ ನೀಡಲಾಗುತ್ತಿದೆ. ಇದಕ್ಕಾಗಿ ಕಾರ್ಮಿಕರ ಇಬ್ಬರು ಮಕ್ಕಳು ನಿಗದಿಪಡಿಸಿದ ಅರ್ಜಿ ನಮೂನೆ ಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಂಡಳಿಗೆ ನೇರವಾಗಿ ಅಥವಾ ತಾಲೂಕು/ಜಿಲ್ಲಾ ಮಟ್ಟದ ಕಾರ್ಮಿಕ ಇಲಾಖಾ ಕಚೇರಿಯಲ್ಲಿ ಸಲ್ಲಿಸಿದ್ದಲ್ಲಿ, ಅದನ್ನು ಪರಿಶೀಲಿಸಿ ನೇರವಾಗಿ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು.
ಈ ಯೋಜನೆಯಡಿ ನಿರ್ವಾಹಕರು ಮತ್ತು ಕ್ಲೀನರ್‌ಗಳು ಷರತ್ತುಗಳನ್ವಯ ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ಅಧಿಕಾರಿಗಳ ಕಛೇರಿ, ಎ-ಬ್ಲಾಕ್, ೧ನೇ ಮಹಡಿ ಇಲ್ಲಿ ನೋಂದಣಿ ಮಾಡಿಸಿಕೊಂಡು ಈ ಯೋಜನೆಯಡಿ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.