ಉಡುಪಿ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಕಥಾ ಕಮ್ಮಟ

ಉಡುಪಿ : ಕನ್ನಡದಲ್ಲಿ ಹಲವು ಲೇಖಕರು ಅತ್ಯುತ್ತಮ ಕಥೆಗಳನ್ನು ಬರೆದು ನಾಡಿನ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರ ಗೊಳಿಸಿ, ಕನ್ನಡಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಸಾಹಿತಿ, ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ ಸಂದರ್ಭದಲ್ಲಿ ಗುರುವಾರ ಎಂಜಿಎಂ ಕಾಲೇಜಿನ ಕನ್ನಡ ಸಾಹಿತ್ಯ ಸಂಘ, ಐಕ್ಯುಎಸಿ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ‘ಕಥಾ ಕಮ್ಮಟ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕನ್ನಡದ ಸಣ್ಣ ಕತೆಗಳ ಪಿತಾಮಹನೆನಿಸಿದ ಮಾಸ್ತಿ, ಶಿವರಾಮ ಕಾರಂತರು, ಲಂಕೇಶ್, ಅನಂತಮೂರ್ತಿ, ವೈದೇಹಿ ಇಂಥವರ ಕಥೆಗಳನ್ನು ವಿದ್ಯಾರ್ಥಿ ಗಳು ಓದಬೇಕು. ಇಂತಹ ಕಮ್ಮಟಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಮುಂದೆ ಒಳ್ಳೆಯ ಕಥೆಗಾರರಾಗಲು ಸಾಧ್ಯವಿದೆ ಎಂದವರು ಅಭಿಪ್ರಾಯಪಟ್ಟರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ, ಎಂಜಿಎಂ ಕಾಲೇಜು ಐಕ್ಯೂಎಸಿ ಮುಖ್ಯಸ್ಥೆ ಪ್ರೊ.ಶೈಲಜಾ, ಕಸಾಪ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್ ಭಂಡಾರಿ ಉಪಸ್ಥಿತರಿದ್ದರು.
ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪುತ್ತಿ ವಸಂತ್ ಕುಮಾರ ಸ್ವಾಗತಿಸಿದರು. ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜನಾರ್ದನ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಕಸಾಪ ತಾಲೂಕು ಘಟಕಾ ಧ್ಯಕ್ಷ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.
ಹಿರಿಯ ಕಥೆಗಾರ, ವಿಮರ್ಶಕರೂ ಆದ ಡಾ.ಬಿ.ಜನಾರ್ದನ ಭಟ್ ಅವರು ‘ಕನ್ನಡದ ಸಣ್ಣಕಥೆಗಳ ಚಾರಿತ್ರಿಕ ನೋಟ ವಸ್ತು, ತಂತ್ರ, ವಿನ್ಯಾಸ’ದ ಕುರಿತು, ಖ್ಯಾತ ಕತೆಗಾರ ಬೆಳಗೋಡು ರಮೇಶ್ ಭಟ್ ‘ಕಥೆಗಳ ಪರಿಕರಗಳು’ ಹಾಗೂ ಟಿ.ಎ.ಎನ್.ಖಂಡಿಗೆ ‘ಕಥೆ ಕಟ್ಟುವ ವಿಧಾನ’ ಕುರಿತು ವಿದ್ಯಾರ್ಥಿಗಳೊಂದಿಗೆ ಮಾಹಿತಿಗಳನ್ನು ಹಂಚಿಕೊಂಡರು.
ಅಪರಾಹ್ನ ಖ್ಯಾತನಾಮ ಸಾಹಿತಿ, ಕಥೆಗಾರರೂ ಆಗಿರುವ ವೈದೇಹಿ ಅವರೊಂದಿಗೆ ‘ಮಾತು-ಮಾತುಕತೆ’ ನಡೆಯಿತು.