‘ಆದಿವಾಸಿಗಳ ಸಮಸ್ಯೆಗಳನ್ನು ಮನವಿ ರೂಪದಲ್ಲಿ ಸರಕಾರಕ್ಕೆ ಸಲ್ಲಿಕೆ’
ಪೀತ್‌ಬೈಲಿಗೆ ಭೇಟಿ ನೀಡಿದ ನಕ್ಸಲ್ ಪುನರ್‌ವಸತಿ-ಶರಣಾಗತಿ ಸಮಿತಿ
ಹೆಬ್ರಿ: ನಕ್ಸಲ್ ನಾಯಕ ಕೂಡ್ಲು ವಿಕ್ರಂ ಗೌಡ ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್‌ಗೆ ಬಲಿಯಾದ ನಾಡ್ಪಾಲು ಗ್ರಾಮದ ಪೀತ್‌ಬೈಲು ಎಂಬಲ್ಲಿನ ಘಟನಾ ಸ್ಥಳಕ್ಕೆ ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಶನಿವಾರ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿತು.
ಸಮಿತಿ ಸದಸ್ಯರಾದ ವಕೀಲ ಶ್ರೀಪಾಲ ಕೆ.ಪಿ. ಮತ್ತು ಹಿರಿಯ ಪತ್ರಕರ್ತ ಪಾರ್ವತೀಶ ಬಿಳಿದಾಳೆ, ಪೀತ್‌ಬೈಲಿನಲ್ಲಿ ಎನ್‌ಕೌಂಟರ್ ನಡೆದ ಮನೆಯ ಯಜಮಾನ ಜಯಂತ್ ಗೌಡ ಸಹೋದರರು, ಆದಿವಾಸಿ ಕುಟುಂಬಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿತು. ಅದೇ ರೀತಿ ಈ ಸಮಿತಿಯು ಕೂಡ್ಲು ಮೇಗದ್ದೆಯಲ್ಲಿರುವ ವಿಕ್ರಂ ಗೌಡ ಅವರ ತಂಗಿ ಸುಗುಣ ಅವರ ಮನೆಗೆ ತೆರಳಿ ಭೇಟಿ ಮಾಡಿತು.
ಈ ಕುರಿತು ʼವಾರ್ತಾಭಾರತಿʼ ಜೊತೆ ಮಾತನಾಡಿದ ಸಮಿತಿ ಸದಸ್ಯ ಶ್ರೀಪಾಲ್ ಕೆ.ಪಿ., ನಾವು ಎನ್‌ಕೌಂಟರ್ ನಡೆದ ಸ್ಥಳಕ್ಕೆ ಭೇಟಿ ನೀಡಿದೆವು. ಆದರೆ ಅಲ್ಲಿ ಮೂರು ಮನೆಗಳಲ್ಲಿ ಯಾರು ಇರಲಿಲ್ಲ. ನಾರಾಯಣ ಗೌಡರ ಮನೆಯಲ್ಲಿ ಎಎನ್‌ಎಫ್ ಸಿಬ್ಬಂದಿಗಳಿದ್ದರು. ಅವರನ್ನು ಕೂಡ ವಿಚಾರಿಸಿದೆವು. ಅಲ್ಲಿನ ಆದಿವಾಸಿ, ಬುಡಕಟ್ಟು ಜನರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆವು. ಅವರ ಸಮಸ್ಯೆ, ಇಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಗಳ ಕುರಿತು ಮಾಹಿತಿ ಪಡೆದು ಕೊಂಡಿದ್ದೇವೆ ಎಂದರು.
ಇಲ್ಲಿ ಮೂಲಭೂತ ಸೌಲಭ್ಯಗಳನ್ನು ಅಗತ್ಯವಾಗಿ ಮಾಡಬೇಕಾಗಿದೆ. ಕಾಡುತ್ಪತ್ತಿ ಸಂಗ್ರಹಕ್ಕೆ ಅರಣ್ಯ ಇಲಾಖೆ ತೊಂದರೆ ಮಾಡದಂತೆ ಸರಕಾರ ನೋಡಿಕೊಳ್ಳಬೇಕು. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರ ಕೂಡಲೇ ಸಮಿತಿ ಸಭೆ ಕರೆಯಬೇಕು. ಈ ಎಲ್ಲ ಸಮಸ್ಯೆಯನ್ನು ಮನವಿ ರೂಪದಲ್ಲಿ ಸಲ್ಲಿಸಿ ಸರಕಾರಕ್ಕೆ ಒತ್ತಡವನ್ನು ಹೇರಲಾಗುವುದು. ನಕ್ಸಲ್ ಪುನರ್ ವಸತಿ ಜೊತೆ ಜನರ ಸಮಸ್ಯೆ ಕೂಡ ಮುಖ್ಯವಾಗುತ್ತದೆ. ನಕ್ಸಲ್ ಚಳವಳಿ ಹುಟ್ಟಲು ಕಾರಣವಾದ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಮೊದಲು ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.
ಸಮಿತಿ ಜವಾಬ್ದಾರಿ ಹೆಚ್ಚಾಗಿದೆ: ಬಿಳಿದಾಳೆ
ಸಮಿತಿ ಸದಸ್ಯ ಪಾರ್ವತೇಶ್ ಬಿಳಿದಾಳೆ ಮಾತನಾಡಿ, ನಕ್ಸಲರ ಶರಣಾಗತಿಗೆ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಈ ಎನ್‌ಕೌಂಟರ್‌ನಿಂದ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ನಕ್ಸಲ್ ಹೋರಾಟವನ್ನು ಕೇವಲ ಕಾನೂನು ಸುವ್ಯವಸ್ಥೆ ಸಮಸ್ಯೆಗೆ ಸೀಮಿತಗೊಳಿಸದೆ ಇಲ್ಲಿನ ಜನರ ಸಮಸ್ಯೆಗಳ ಪರಿಹಾರಕ್ಕೂ ಆದ್ಯತೆ ನೀಡುವ ಕಾರ್ಯ ಮಾಡ ಬೇಕು. ಅದಕ್ಕಾಗಿ ಅವರಿಗೆ ಪ್ರಜಾಪ್ರಭುತ್ವ ನೆಲೆಯಲ್ಲಿ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಇಲ್ಲಿನ ಜನರ ಸಮಸ್ಯೆಗಳು ಮುನ್ನಲೆಗೆ ಬರುವುದಿಲ್ಲ ಎಂದು ಹೇಳಿದರು.
ಆದಿವಾಸಿಗಳು ಅರಣ್ಯ ಇಲಾಖೆ ಜೊತೆ ಇರುವ ಅಸಮಾಧಾನಗಳನ್ನು ತೋಡಿಕೊಂಡಿದ್ದಾರೆ. ಕಾಡುತ್ಪತ್ತಿ ಸಂಗ್ರಹಿಸುವ ಆದಿವಾಸಿಗಳ ವಿರುದ್ಧ ಪ್ರಕರಣ ದಾಖಲಿಸಿ ತೊಂದರೆ ಕೊಡಲಾಗುತ್ತದೆ. ನಮ್ಮ ಈ ಭೇಟಿಯ ಉದ್ದೇಶ ಶಸ್ತ್ರಾಸ್ತ್ರ ಹೋರಾಟವನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರುವರಿಗೆ ಸೌಲಭ್ಯ ಕಲ್ಪಿಸುವುದಾಗಿದೆ. ಕಳೆದ ಎಪ್ರಿಲ್ ಮೇ ತಿಂಗಳಲ್ಲಿ ಕುತ್ತೂರು ಸೇರಿದಂತೆ ಬೇರೆ ಬೇರೆ ಪ್ರದೇಶಗಳಿಗೆ ತೆರಳಿ, ನಕ್ಸಲ್ ಹೋರಾಟದಲ್ಲಿರುವವರ ಕುಟುಂಬಗಳನ್ನು ಭೇಟಿ ಮಾಡಿದ್ದೇವು. ನಕ್ಸಲ್ ಹೋರಾಟದಲ್ಲಿರುವವರನ್ನು ಮುಖ್ಯವಾಹಿನಿ ಬರುವಂತೆ ಮನವೊಲಿಸಲು ಕುಟುಂಬಗಳಿಗೆ ತಿಳಿಸಿದ್ದೇವೆ ಎಂದರು.
ಶರಣಾಗುವವರಿಗೆ ಸರಕಾರ ಹೊಸ ಪ್ಯಾಕೇಜ್ ಘೋಷಿಸಿದ್ದು, ಅದರ ಮಾಹಿತಿ ಮತ್ತು ಸಮಿತಿಯ ಸದಸ್ಯರ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್‌ಗಳಿರುವ ಪ್ರತಿಗಳನ್ನು ನೂರಾರು ಆದಿವಾಸಿ ಕುಟುಂಬಗಳಿಗೆ ಹಂಚಿಕೆ ಮಾಡಿದ್ದೇವೆ. ನಮ್ಮ ಸಮಿತಿ ಎನ್‌ಕೌಂಟರ್‌ಗೆ ಸಂಬಂಧಪಟ್ಟಂತೆ ನೇರವಾಗಿ ಪರಿಶೀಲನೆ ಮಾಡಲು ಬಂದಿರುವುದಲ್ಲ. ಘಟನೆ ಹಿನ್ನೆಲೆಯಲ್ಲಿ ಕಾಡಿನಲ್ಲಿ ಉಳಿದುಕೊಂಡವರನ್ನು ಮನಸ್ಸು ಬದಲಾಯಿಸಿ ಮುಖ್ಯವಾಹಿನಿ ಬರುವುದಾದರೆ ಸಹಾಯ ಮಾಡಲು ಸಮಿತಿ ಸಿದ್ಧ ಇದೆ ಎಂಬುದಾಗಿ ತೋರಿಸಲು ಬಂದಿರುವುದು ಎಂದರು.
‘ನಕ್ಸಲ್ ಚಟುವಟಿಕೆಯ ಎಷ್ಟು ಮಂದಿ ಇದ್ದಾರೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಎಎನ್‌ಎಫ್ ಹಾಗೂ ಗುಪ್ತಚಾರ ಇಲಾಖೆಯ ಮಾಹಿತಿ ಯಂತೆ ಕರ್ನಾಟಕ ರಾಜ್ಯದ ನಾಲ್ಕೈದು ಮಂದಿ ಇದ್ದಾರೆ ಎಂದು ಅಂದಾಜು ಮಾಡಲಾಗಿದೆ. ಇನ್ನೂ ಜಾಸ್ತಿ ಇರಬಹುದು ಹೇಳಲು ಆಗಲ್ಲ. ಇವರೆನ್ನೆಲ್ಲ ಮನವೊಲಿಸಿ ಮುಖ್ಯವಾಹಿನಿ ತರುವುದು ನಮ್ಮ ಸಮಿತಿಯ ಉದ್ದೇಶವಾಗಿದೆ’
-ಪಾರ್ವತೀಶ ಬಿಳಿದಾಳೆ, ಸಮಿತಿ ಸದಸ್ಯರು
‘ನಕ್ಸಲ್ ಚಳವಳಿ ಆರಂಭವಾದ ನಂತರ ಈ ಪ್ರದೇಶಗಳಲ್ಲಿ ಬದಲಾವಣೆ ಗಳಾಗಿವೆಯೇ ಎಂಬುದುರ ಬಗ್ಗೆ ಮಾಹಿತಿ ಪಡೆದುಕೊಂಡೆವು. ಇಲ್ಲಿ ಸರಕಾರ ಜನರು ನಕ್ಸಲ್ ಸಂಘಟನೆಗೆ ಹೋಗುತ್ತಾರೆ ಎಂಬ ಕಾರಣಕ್ಕಾಗಿ ಸ್ಪಲ್ಪ ಪ್ರಮಾಣದಲ್ಲಿ ಗಮನ ಹರಿಸಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಯಾವುದೇ ಸುಧಾರಣೆಗಳಾಗಿಲ್ಲ’
-ಶ್ರೀಪಾಲ್ ಕೆ.ಪಿ., ಸಮಿತಿ ಸದಸ್ಯರು
ನ್ಯಾಯಾಂಗ ತನಿಖೆ ಬಗ್ಗೆ ಸರಕಾರದಿಂದ ತೀರ್ಮಾನ
ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ತನಿಖೆ ಮಾಡುವಂತೆ ವಿವಿಧ ಸಂಘಟನೆಗಳು ಒತ್ತಾಯ ಮಾಡು ತ್ತಿವೆ. ಈ ಬಗ್ಗೆ ಸರಕಾರ ಗಮನ ಹರಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಆ ಬಗ್ಗೆ ಸಮಿತಿಯಿಂದ ಯಾವುದೇ ತೀರ್ಮಾನ ಆಗಿಲ್ಲ. ಆ ಕುರಿತು ಸಭೆ ಕರೆದು ತೀರ್ಮಾನ ಮಾಡುತ್ತೇವೆ ಎಂದು ಸಮಿತಿ ಸದಸ್ಯ ಶ್ರೀಪಾಲ್ ಕೆ.ಪಿ. ತಿಳಿಸಿದರು.
‘ನ್ಯಾಯಾಂಗ ತನಿಖೆ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ. ಸಂಘಟನೆಗಳು ಈ ಕುರಿತು ಸರಕಾರಕ್ಕೆ ಮನವಿ ಮಾಡಬಹುದು. ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸರಕಾರಕ್ಕೆ ಬಿಟ್ಟದ್ದು. ಈಗಾಗಲೇ ಈ ಕುರಿತು ಹೆಬ್ರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ನ್ಯಾಯಾಂಗ ತನಿಖೆ ಇದರಿಂದ ಹೊರತು ಪಡಿಸಿರುವುದು. ಇದನ್ನು ಸರಕಾರವೇ ಪರಿಶೀಲನೆ ಮಾಡಬೇಕು ಎಂದು ಪಾರ್ವತೀಶ ಬಿಳಿದಾಳೆ ಹೇಳಿದರು.