ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ
ಉಡುಪಿ, ಆ.4: ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆ ವತಿಯಿಂದ 2022 -23ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪಿಯುಸಿ ಹಾಗೂ ಪದವಿ ಶಿಕ್ಷಣದಲ್ಲಿ ಅತ್ಯಧಿಕ ಅಂಕ ಗಳಿಸಿದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಉದ್ಯಾವರ ಎಂ.ಇ.ಟಿ. ಶಾಲೆಯ ಅಧ್ಯಕ್ಷ, ಉದ್ಯಮಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬೆಳೆಯುವುದರೊಂದಿಗೆ ತಮ್ಮಲ್ಲಿ ನೈತಿಕತೆಯನ್ನು ಬೆಳೆಸಿ ಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಮೈಗೂಡಿಸಿಕೊಂಡಾಗ ಮಾತ್ರ ಈ ಪ್ರತಿಭೆಗಳಿಗೆ ಗೌರವ ದೊರೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮೀಫ್ ಸಂಸ್ಥೆ ಕೊಡ ಮಾಡಿದ ಉತ್ತಮ ಕಾಲೇಜ್ ಪ್ರಶಸ್ತಿಯನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಶಹನ ವಾಜ್, ಶಿಕ್ಷಣ ಸಂಸ್ಥೆಯ ಹಿತೈಷಿ ಅನ್ಸಾರ್ ಟಿ.ಎಸ್., ಹಿರಿಯ ಟ್ರಸ್ಟಿ ಎಚ್.ಶಬ್ಬೀರ್ ಸಾಹೇಬ್, ಸಲಹಾ ಮಂಡಳಿ ಸದಸ್ಯ ಅನ್ವರ್‌ಆಲಿ, ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಮುಖ್ಯಸ್ಥರು ಉಪಸ್ಥಿತರಿದ್ದರು.
ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ರಿಹಾ ಸ್ವಾಗತಿಸಿ ದರು. ನೌರಿನ್ ನೂರ್ ವಂದಿಸಿದರು. ಐಶಾ ನದಾ ಕಾರ್ಯಕ್ರಮ ನಿರೂಪಿಸಿದರು.