ಕೋಡಿ ಬ್ಯಾರೀಸ್‌ನಲ್ಲಿ ಶಿಕ್ಷಕರ ದಿನಾಚರಣೆ
ಕುಂದಾಪುರ, ಸೆ.6: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಶಿಕ್ಷಕರುನ್ನು ದ್ದೇಶಿಸಿ ಮಕ್ಕಳಿಗೆ ಕೊಡಲೇಬೇಕಾದ ಆಸ್ತಿಯೆಂದರೆ ಶಿಕ್ಷಣ. ಈ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ. ಶಿಕ್ಷಕ ವೃತ್ತಿ ಪವಿತ್ರವಾದುದು. ತಮ್ಮ ವೃತ್ತಿಯ ಮೂಲಕ ದೇಶದ ಸುಂದರ ಭವಿಷ್ಯ ಕಟ್ಟಬೇಕು ಎಂದು ಹೇಳಿದರು.
ಬ್ಯಾರೀಸ್ ವಿಶ್ವಸ್ತ ಮಂಡಳಿಯ ಸದಸ್ಯ ಡಾ.ಆಸೀಫ್ ಬ್ಯಾರಿ ಮಾತನಾಡಿ, ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು, ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುವುದರ ಮೂಲಕ ತಮ್ಮಿಂದ ಕಲಿತು ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳುವ ಮಕ್ಕಳು ತಮ್ಮ ಶಿಕ್ಷಕರನ್ನು ಸದಾ ನೆನಪಿಸುವಂತಾ ಕಾರ್ಯ ಆಗಬೇಕು ಎಂದು ಶುಭ ಹಾರೈಸಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೈಯದ್ ಮೊಹಮ್ಮದ್ ಬ್ಯಾರಿ ಮಾತನಾಡಿ, ಶಿಕ್ಷಕ ವೃತ್ತಿ ಪುಣ್ಯವಾದುದು. ಅವರ ಸೇವೆಗೆ ಬೆಲೆ ಕಟ್ಟಲು ಅಸಾಧ್ಯ. ಒಗ್ಗಟ್ಟಿನಲ್ಲಿ ಸಮಷ್ಟಿ ಹಿತವನ್ನು ಇರಿಸಿ ಕೆಲಸ ಮಾಡಿದಾಗ ಒಂದು ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ ಭಾರತದ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯ ಎಂದು ತಿಳಿಸಿದರು.
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್. ಸಂದೇಶ ವಾಚಿಸಿದರು. ಬ್ಯಾರೀಸ್ ಡಿ.ಎಡ್ ಪ್ರಾಂಶು ಪಾಲೆ ಡಾ.ಫಿರ್ದೋಸ್, ಬಿ.ಎಡ್‌ನ ಉಪಪ್ರಾಂಶುಪಾಲ ಪ್ರವೀಣ್ ಕುಮಾರ್ ಕೆ.ಪಿ., ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ಸಲಹಾ ಮಂಡಳಿಯ ಸದಸ್ಯ ಅಬುಷೇಕ್ ಸಾಹೇಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್, ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಮೂಹ ಗಾಯನ ಸುಂದರವಾಗಿ ಮೂಡಿ ಬಂದಿತು. ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಕೆಲವೊಂದು ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಂಡು ವಿಜೇತರಿಗೆ ಬಹುಮಾನ ನೀಡಿದರು. ತೃತೀಯ ಬಿಸಿಎ ವಿದ್ಯಾರ್ಥಿನಿ ಬುಶ್ರಾ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿ ದರು. ಅಫ್ರಾ ಸ್ವಾಗತಿಸಿದರು. ಆಲಿಯಾ ವಂದಿಸಿದರು. ಮಿಸ್ಬಾ ಕಾರ್ಯಕ್ರಮ ನಿರೂಪಿಸಿದರು.