ಭಾಷೆಯ ಅಳಿವು ಅದರ ಸಂಸ್ಕೃತಿಯ ಅವಸಾನ: ಡಿ.ಸಿ ಡಾ.ವಿದ್ಯಾ ಕುಮಾರಿ
ಮಣಿಪಾಲ, ನ.7: ಜಗತ್ತಿನ ಅಳಿಯುತ್ತಿರುವ ಭಾಷೆಗಳ ಪಟ್ಟಿಯಲ್ಲಿ ನಮ್ಮ ಸುತ್ತಮುತ್ತಲಿರುವ ಎಷ್ಟೋ ಭಾಷೆಗಳು ಕೂಡ ಇವೆ. ಒಂದು ಭಾಷೆಯ ಅಳಿವು ಎಂದರೆ ಒಂದು ಸಂಸ್ಕೃತಿಯ ಅವಸಾನವೇ ಸರಿ ಎಂದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಹೆಯರ್ ಎಜುಕೇಶನ್ನ ಭಾಷಾ ವಿಭಾಗದ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರದ ವತಿಯಿಂದ ಮಣಿಪಾಲ ಮಾಹೆ ಕಟ್ಟಡದ ಕೌನ್ಸಿಲಿಂಗ್ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವ ಮತ್ತು ಮಾಹೆಯ ಸಂಸ್ಥಾಪಕ ಡಾ.ಟಿ.ಎಂ.ಎ.ಪೈ ಅವರ 125ನೆ ಜನ್ಮ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಮಾತೃಭಾಷೆಯನ್ನು ಉಳಿಸಿಕೊಳ್ಳುವುದರ ಮೂಲಕ ನಮ್ಮ ಸಂವೇದನಾ ಶೀಲತೆಯನ್ನು ಉಳಿಸಿಕೊಳ್ಳಬೇಕು. ನಮ್ಮ ಕೀಳರಿಮೆಯನ್ನು ಬಿಟ್ಟು ಕನ್ನಡ ದಲ್ಲಿಯೇ ಮಾತನಾಡಬೇಕು. ಆ ಮೂಲಕ ಕನ್ನಡ ಸಂಸ್ಕೃತಿಯನ್ನು ಉಳಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿ ಉದ್ಯಮಿ ಡಾ.ಎಚ್.ಎಸ್.ಶೆಟ್ಟಿ 'ಕನ್ನಡ ಶಾಲೆ ಮತ್ತು ನಾನು' ಎಂಬ ವಿಷಯದ ಕುರಿತು ಮಾತನಾಡಿ, ಕನ್ನಡ ಶಾಲೆಯಿಂದ ಕಲಿತು ಮೇಲೆ ಬಂದಿದ್ದರಿಂದಲೇ ನಾನು ಸೂಕ್ಷ್ಮ್ಸ ಸಂವೇದನೆಯನ್ನು ಅಳವಡಿಸಿ ಕೊಳ್ಳುವುದಕ್ಕೆ ಸಾಧ್ಯವಾಯಿತು. ಎಲ್ಲ ಭಾಷೆಗಳು ಭಾವವನ್ನು ಪ್ರತಿನಿಧಿಸಲಾರವು. ನಮ್ಮ ನೋವನ್ನು, ಬೇಸರವನ್ನು ಅಭಿವ್ಯಕ್ತಿಸಲು ಮಾತೃಭಾಷೆಯೇ ಬೇಕು. ಇಂಗ್ಲಿಷ್ ಸೇರಿದಂತೆ ಎಲ್ಲ ಭಾಷೆಗಳನ್ನು ಕಲಿಯಬೇಕು. ಆದರೆ ಕನ್ನಡವನ್ನು ಯಾವತ್ತೂ ಮರೆಯಬಾರದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಹೆಯ ಪ್ರೊ-ವೈಸ್ ಚಾನ್ಸಲರ್ ಡಾ.ಶರತ್ ರಾವ್ ಮಾತನಾಡಿ, ಡಾ.ಟಿ.ಎಂ.ಎ.ಪೈ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ. ಅವರು ಹಾಕಿಕೊಟ್ಟ ಹಾದಿಯಲ್ಲಿ ಮಾಹೆ ಮುಂದುವರಿಯು ತ್ತಿದೆ. ಕನ್ನಡ ಭಾಷೆ ಮತ್ತು ಪ್ರಾದೇಶಿಕ ಭಾಷೆಗಳಿಗೆ ಸಂಬಂಧಿಸಿದ ವಿಭಾಗವನ್ನು ತೆರೆದು ಎಲ್ಲ ಜ್ಞಾನಶಿಸ್ತುಗಳ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಯನ್ನು ಕಲಿತುಕೊಳ್ಳುವ ಅವಕಾಶ ನೀಡಲಾಗುತ್ತದೆ ಎಂದರು.
ಭಾಷಾ ವಿಭಾಗದ ಮುಖ್ಯಸ್ಥ ಪ್ರೊ.ರಾಹುಲ್ ಪುಟ್ಟಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ.ಪೃಥ್ವೀರಾಜ ಕವತ್ತಾರು ಸ್ವಾಗತಿಸಿದರು. ಕನ್ನಡ ಶಾಲಾ ಅಧ್ಯಾಪಕ ಮುರಲಿ ಕಡೆಕಾರ್ ಅತಿಥಿಗಳ ಪರಿಚಯ ಮಾಡಿದರು. ಪ್ರಾಧ್ಯಾಪಕ ಡಾ.ಅರವಿಂದ್ ಭಟ್ ವಂದಿಸಿದರು. ತತ್ತ್ವಶಾಸ್ತ್ರ ವಿಭಾಗದ ಎಂ. ವಿಷ್ಣುವರ್ಧನ್ ಕಾರ್ಯಕ್ರಮ ನಿರೂಪಿಸಿದರು.