ಲಾರಿ ಚಾಲಕ ಮಾಲಕರಿಂದ ಕೋಟೇಶ್ವರ, ಹೆಮ್ಮಾಡಿಯಲ್ಲೂ ಮುಷ್ಕರ
ಕುಂದಾಪುರ, ಸೆ.27: ಕಟ್ಟಡ ಸಾಮಾಗ್ರಿಗಳ ಸಾಗಾಟಕ್ಕೆ ಜಿಲ್ಲಾಡಳಿತ ಹೇರಿದ ಕಠಿಣ ನಿಯಮಗಳನ್ನು ವಿರೋಧಿಸಿ ಶೀಘ್ರ ವಾಗಿ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಲಾರಿ ಮಾಲಕರು ಹಾಗೂ ಚಾಲಕರು ಕಟ್ಟಡ ಸಾಮಾಗ್ರಿಗಳ ಸಾಗಾಟ ಸ್ಥಗಿತ ಗೊಳಿಸಿ ಬುಧವಾರ ಕುಂದಾಪುರ ವಲಯದ ಕೋಟೇಶ್ವರ ಹಾಗೂ ಬೈಂದೂರು ವಲಯದ ಹೆಮ್ಮಾಡಿಯಲ್ಲಿ ಅನಿರ್ದಿಷ್ಟಾ ವಧಿ ಮುಷ್ಕರ ಆರಂಭಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಲಾರಿ ಚಾಲಕರು, ಮಾಲಕರಿಗೆ ಸಮಸ್ಯೆಯಾಗಿದ್ದು ನೈತಿಕ ಬೆಂಬಲ ನೀಡಲಾಗಿದೆ. ರೋಡ್ ಟ್ಯಾಕ್ಸ್, ಚಾಲಕರ ಸಂಬಳ, ವಾಹನ ಸಾಲದ ಕಂತು ಕಟ್ಟುವ ಜೊತೆ ಮನೆ ನಿರ್ವಹಣೆ ಮಾಡಬೇಕಿದ್ದು ಜನಪ್ರತಿನಿಧಿ ಗಳು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಕೋಟೇಶ್ವರದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಬೀಜಾಡಿ ಆಗ್ರಹಿಸಿದರು.
ಹೆಮ್ಮಾಡಿಯಲ್ಲಿ ಮುಷ್ಕರದ ನೇತೃತ್ವ ವಹಿಸಿ ಮಾತನಾಡಿದ ಲಾರಿ ಹಾಗೂ ಟೆಂಪೋ ಮಾಲೀಕರ ಸಂಘದ ಪ್ರಮುಖರಾದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಜಿಲ್ಲಾಡಳಿತದ ಕಠಿಣ ಕ್ರಮಗಳನ್ನು ಸಡಿಲಗೊಳಿಸಬಹುದು ಎಂದು ವಾರಗಳಿಂದ ಕಾಯುತ್ತಿದ್ದೇವೆ. ಆದರೆ ಜಿಲ್ಲಾಡಳಿತದ ಮೌನ ಧೋರಣೆಯನ್ನು ಖಂಡಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದೇವೆ. ಉಸ್ತುವಾರಿ ಸಚಿವರಿಗೆ ನಮ್ಮ ಸಮಸ್ಯೆ ಹೇಳಿಕೊಂಡರೂ ಇಲ್ಲಿಯ ತನಕವೂ ಅವರು ನಮಗೆ ಸ್ಪಂದಿಸಿಲ್ಲ. ಲಾರಿ ಚಾಲಕರು ಹಾಗೂ ಮಾಲಕರನ್ನು ಕರೆದು ಉಸ್ತುವಾರಿ ಸಚಿವರು ಸಭೆ ನಡೆಸಬೇಕು. ಸಭೆ ನಡೆಸಿ ನಮ್ಮ ಅಹವಾಲು ಗಳನ್ನು ಆಲಿಸಬೇಕು ಎಂದು ಆಗ್ರಹಿಸಿದರು.
ಕೋಟೇಶ್ವರ ಹೋರಾಟದ ಮುಖಂಡ ಪ್ರಕಾಶ್ ಪೂಜಾರಿ ಬೀಜಾಡಿ ಮಾತನಾಡಿದರು. ಹೆಮ್ಮಾಡಿ ಪೇಟೆ ಹಾಗೂ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಬದಿ ನೂರಾರು ಲಾರಿ, ಟೆಂಪೋ ನಿಲ್ಲಿಸಿ ಮುಷ್ಕರ ನಡೆಸಲಾಗುತ್ತಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.