ಅ.27ರಂದು ಉಡುಪಿ ಜಿಲ್ಲಾ ಮತದಾರರ ಪರಿಷ್ಕೃತ ಕರಡು ಪಟ್ಟಿ ಪ್ರಕಟ: ಡಿಸಿ ಡಾ. ವಿದ್ಯಾಕುಮಾರಿ
ಜಿಲ್ಲೆಯಲ್ಲಿ 10.37 ಲಕ್ಷ ಮತದಾರರು
ಉಡುಪಿ, ಅ.26: ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆದಿದ್ದು, ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಅ.27ರಂದು ಪ್ರಕಟಿಸಲಾಗುವುದು. ನಾಳೆಯೇ ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳಿಗೆ ಕರಡು ಪಟ್ಟಿಯ ಪ್ರತಿಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ. ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿ ಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲೆಯ ವೆಬ್‌ಸೈಟ್‌ನಲ್ಲಿ ಕರಡು ಮತದಾರರ ಪಟ್ಟಿಯ ವಿವರ ಇರಲಿದ್ದು, ಸಾರ್ವಜನಿಕರು ಇದನ್ನು ಪರಿಶೀಲಿಸಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಒಂದು ವೇಳೆ ಯಾರದೇ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ತಕ್ಷಣ ಹೆಸರು ಸೇರ್ಪಡೆಗೆ ನಿಗದಿತ ಅರ್ಜಿ ಕೊಟ್ಟು ಹೆಸರನ್ನು ಸೇರಿಸ ಬಹುದು ಹಾಗೂ ಮುಂದಿನ ಚುನಾವಣೆಯಲ್ಲಿ (ಲೋಕಸಭಾ) ಮತ ಚಲಾಯಿಸಬಹುದು. ಇದಕ್ಕಾಗಿ ತಮ್ಮ ಬಿಎಲ್‌ಓಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
10.37 ಲಕ್ಷ ಮತದಾರರು: ಕರಡು ಮತದಾರರ ಪಟ್ಟಿಯಂತೆ ಸದ್ಯ ಜಿಲ್ಲೆಯಲ್ಲಿರುವ ಒಟ್ಟು ಮತದಾರರ ಸಂಖ್ಯೆ 10,37,677. ಇವರಲ್ಲಿ ಪುರುಷ ಮತದಾರರ ಸಂಖ್ಯೆ 5,00,924 ಆದರೆ, ಮಹಿಳಾ ಮತದಾರರ ಸಂಖ್ಯೆ 5,38,737. ಜಿಲ್ಲೆಯ 16 ಮಂದಿ ತೃತೀಯ ಲಿಂಗ ಮತದಾರರು ಇದ್ದಾರೆ ಎಂದವರು ತಿಳಿಸಿದರು.
ಕರಡು ಮತದಾರರ ಪಟ್ಟಿಯ ಕುರಿತಂತೆ ಯಾವುದೇ ದೂರು ಅಥವಾ ಆಕ್ಷೇಪಣೆಗಳಿದ್ದಲ್ಲಿ ನಾಳೆಯಿಂದ ಡಿ.9ರವರೆಗೆ ಲಿಖಿತ ದೂರು ಸಲ್ಲಿಸಬಹುದು ಎಂದ ಜಿಲ್ಲಾಧಿಕಾರಿಗಳು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಮೃತ ವ್ಯಕ್ತಿಯ ಹೆಸರು ತೆಗೆಯಲು, ಹೆಸರನ್ನು ಬೇರೊಂದು ಕಡೆಗೆ ವರ್ಗಾಯಿಸಲು ಅನುಕೂಲವಾಗುವಂತೆ ತಮ್ಮೂರಿನ ಮತಟ್ಟೆಗಳಲ್ಲಿ ವಿಶೇಷ ಅಭಿಯಾನ ನಡೆಯಲಿದೆ. ಈ ದಿನಗಳಂದು ಬಿಎಲ್‌ಓಗಳು ಅಲ್ಲಿ ಲಭ್ಯವಿರುವರು ಎಂದರು.
ವಿಶೇಷ ಅಭಿಯಾನ ನವೆಂಬರ್ 18, ನ.19, ಡಿ.3 ಮತ್ತು ಡಿ.4ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಮೃತ ಮತದಾರರ ಹೆಸರು ತೆಗೆಯಲು ಫಾರ್ಮ್ ನಂ7, ಹೆಸರು ಸೇರ್ಪಡೆಗೆ ಫಾರ್ಮ್ ನಂ.8 ಹಾಗೂ ಮತಗಟ್ಟೆ ವರ್ಗಾವಣೆಗೆ ಫಾರ್ಮ್ ನಂ.8ಎ ಅನ್ನು ಭರ್ತಿ ಮಾಡಿ ನೀಡಬಹುದು ಎಂದು ಡಾ.ವಿದ್ಯಾಕುಮಾರಿ ವಿವರಿಸಿದರು.
ಪಟ್ಟಿಯ ಕುರಿತಂತೆ ಬರುವ ದೂರು ಹಾಗೂ ಆಕ್ಷೇಪಣೆಗಳನ್ನು ಡಿ.26ರಂದು ವಿಲೇವಾರಿ ಮಾಡಲಾಗುತ್ತದೆ. 2024ರ ಜನವರಿ 5ರಂದು ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಜಿಲ್ಲೆಯಲ್ಲಿ ಮನೆಮನೆಗೆ ಭೇಟಿ ನೀಡಿ ಇಪಿ ಅನುಪಾತದ ಪರಿಷ್ಕರಣೆ ನಡೆಯುತ್ತಿದೆ ಎಂದೂ ಅವರು ಹೇಳಿದರು.
ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಮತದಾರರ ಪ್ರಮಾಣ ಸಾಮಾನ್ಯವಾಗಿ ಶೇ.65ರಿಂದ 70 ಇರಬೇಕಿದ್ದು, ಇದಕ್ಕೆ ಇಪಿ ಅನುಪಾತ ಎಂದು ಕರೆಯ ಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಇದು ಶೇ.81ರಷ್ಟಾಗಿದೆ. ಇದಕ್ಕೆ ಮೃತವ್ಯಕ್ತಿಗಳ ಹೆಸರನ್ನು ಪಟ್ಟಿಯಿಂದ ತೆಗೆಯದಿರುವುದು, ತಾವು ಎಲ್ಲಿರುತ್ತೇವೊ ಅಲ್ಲಿನ ಬದಲು, ತಮ್ಮ ಊರಿನಲ್ಲೂ ಅವರ ಹೆಸರು ಮತದಾರರ ಪಟ್ಟಿಯಲ್ಲಿರುವುದು ಇದಕ್ಕೆ ಕಾರಣ. ಹೀಗಾಗಿ ಮನೆಮನೆಗೆ ಭೇಟಿ ನೀಡಿ ಇಲ್ಲದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುತ್ತಿದೆ ಎಂದರು.