ಜಿಲ್ಲೆಯ 42 ಮಂದಿ ಬೀಡಿ ಕಾರ್ಮಿಕರು ಇತರ ಉದ್ಯೋಗಕ್ಕೆ: ಉಡುಪಿ ಜಿಲ್ಲಾಧಿಕಾರಿ
ತಂಬಾಕು ನಿಯಂತ್ರಣ ಮಾಸಿಕ ಸಭೆ
ಉಡುಪಿ: ತಂಬಾಕು ಉತ್ಪನ್ನಗಳ ಬಳಕೆಯಿಂದ ಮಾತ್ರವಲ್ಲದೇ, ಅವುಗಳನ್ನು ಬಳಸಿ ಬೀಡಿ ಕಟ್ಟುವ ಉದ್ಯೋಗ ನಿರತರ ಆರೋಗ್ಯದ ಮೇಲೂ ಅವುಗಳ ದುಷ್ಪರಿಣಾಮ ಉಂಟಾಗುತಿದ್ದು, ಈಗಾಗಲೇ ಬೀಡಿಕಟ್ಟುವ ಉದ್ಯೋಗ ಮಾಡುತಿದ್ದ 42 ಮಂದಿ ಕಾರ್ಮಿಕರು ಅದನ್ನು ಬಿಟ್ಟು ಇತರೆ ಉದ್ಯೋಗ ಮಾಡಲು ಸಂಜೀವಿನಿ ಕಾರ್ಯಕ್ರಮದಡಿ ಸದಸ್ಯತ್ವ ಪಡೆದು ಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿರುವ ಬೀಡಿ ಕಟ್ಟುವ ಕಾರ್ಮಿಕರುಗಳಿಗೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ, ಅವರು ಇತರೆ ಉದ್ಯೋಗಗಳನ್ನು ಕೈಗೊಳ್ಳುವ ಕುರಿತು ಅರಿವು ಮೂಡಿಸಬೇಕು ಎಂದ ಜಿಲ್ಲಾಧಿಕಾರಿ, ಈಗಾಗಲೇ 42 ಮಂದಿ ಕಾರ್ಮಿಕರು ಬೀಡಿ ಕಟ್ಟುವ ಉದ್ಯೋಗವನ್ನು ಬಿಟ್ಟು ಇತರೆ ಉದ್ಯೋಗ ಮಾಡಲು ಸಂಜೀನಿ ಕಾರ್ಯಕ್ರಮದಡಿ ಹೊಸದಾಗಿ ಸದಸ್ಯತ್ವ ಪಡೆದು ಕೊಂಡಿದ್ದಾರೆ ಎಂದರು.
ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಮೊದಲು ಸ್ಥಳೀಯ ಸಂಸ್ಥೆಗಳ ವತಿಯಿಂದ ಪ್ರತ್ಯೇಕ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಗ್ರಾಮಗಳಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಅಲ್ಲಿನ ಜನರ ಮನವೊಲಿಸಿ, ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸುವುದರೊಂದಿಗೆ ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಡಾ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಂಬಾಕುಮುಕ್ತ ಬಹುಮಹಡಿ ಕಟ್ಟಡ: ಬಹುಮಹಡಿ ವಸತಿ ಸಮುಚ್ಛಯಗಳ ವ್ಯಾಪ್ತಿಯನ್ನು ತಂಬಾಕು ಉತ್ಪನ್ನಗಳ ಮುಕ್ತ ವಲಯವೆಂದು ಘೋಷಿಸಲು ಅಲ್ಲಿನ ಜನರ ಮನವೊಲಿಸಿ ಎಂದ ಅವರು, ಕುಂದಾಪುರ ತಾಲೂಕಿನ ಸ್ವಸ್ತಿಕ್ ಎನ್ ಕ್ಲೇವ್ ಬಹುಮಹಡಿ ವಸತಿ ಸಮುಚ್ಛಯವನ್ನು ತಂಬಾಕು ಮುಕ್ತ ಪ್ರದೇಶವಾಗಿ ಶೀಘ್ರದಲ್ಲಿಯೇ ಘೋಷಿಸಲಾಗುವುದು ಎಂದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಮಾರಕ ರೋಗಗಳಾದ ಕ್ಯಾನ್ಸರ್, ಹೃದಯ ಸಂಬಂಧಿತ ರೋಗ, ಉಸಿರಾಟದ ಕಾಯಿಲೆ ಸೇರಿದಂತೆ ವಿವಿಧ ರೋಗಗಳು ಉಂಟಾಗುತ್ತವೆ. ಇಂತಹ ಉತ್ಪನ್ನಗಳಿಂದ ಪ್ರತಿಯೊಬ್ಬರೂ ದೂರ ಇರಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯ ಎಲ್ಲಾ ಶಾಲೆಗಳ ವ್ಯಾಪ್ತಿಯಲ್ಲಿ ‘ತಂಬಾಕು ಮುಕ್ತ ವಲಯ’ ವೆಂಬ ಫಲಕಗಳನ್ನು ಅಳವಡಿಸಲಾಗಿದೆ. ಶಾಲೆಯ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. 18 ವರ್ಷದೊಳಗಿನವರಿಗೆ ಬೀಡಿ, ಸಿಗರೇಟ್‌ಗಳನ್ನು ಮಾರಾಟ ಮಾಡುವ ಹಾಗಿಲ್ಲ. ಒಂದೊಮ್ಮೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅವರುಗಳ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಸಹಾಯಕ ಕಮಿಷನರ್ ರಶ್ಮಿ ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಢಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಆರೋಗ್ಯ ಇಲಾಖೆಯ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
‘ಜಿಲ್ಲೆಯಲ್ಲಿ ಫೆಬ್ರವರಿ 1ರಿಂದ ಈವರೆಗೆ ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಕೋಟ್ಪಾ ನಿಯಂತ್ರಣ ತನಿಖಾ ದಳ ತಂಡ ರಚಿಸಿ, ಜಿಲ್ಲಾದ್ಯಂತ 82 ದಾಳಿಗಳನ್ನು ಹಮ್ಮಿಕೊಂಡಿದ್ದು, 919 ತಂಬಾಕು ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿ, 698 ಪ್ರಕರಣಗಳಲ್ಲಿ 99,204 ರೂ.ದಂಡವನ್ನು ವಸೂಲಿ ಮಾಡಲಾಗಿದೆ. ಮುಂದೆಯೂ ಕೋಟ್ಪಾ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕು.
-ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ.