ಉಳ್ಳೂರು ಗ್ರಾಮದಲ್ಲಿ ಸುಂಟರಗಾಳಿ: ಮನೆ, ತೋಟಕ್ಕೆ ಅಪಾರ ಹಾನಿ
ಕುಂದಾಪುರ: ಸಿದ್ದಾಪುರ ಸಮೀಪದ ಉಳ್ಳೂರು-74 ಗ್ರಾಮದಲ್ಲಿ ಬುಧವಾರ ಮುಂಜಾನೆ ವೇಳೆಗೆ ಬೀಸಿದ ಭಾರೀ ಸುಂಟರಗಾಳಿಗೆ ಹಲವು ಮನೆ ಹಾಗೂ ತೋಟಗಳಿಗೆ ಅಪಾರ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಮಧುರಬಾಳು, ಮತ್ಕೋಡು, ಹೊಂಡದಗದ್ದೆ, ಅರ್ಜಿಲ್ ಪ್ರದೇಶದಲ್ಲಿ ಸುಂಟರಗಾಳಿಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಅಡಿಕೆ ಮರ, ನೂರಕ್ಕೂ ಹೆಚ್ಚು ತೆಂಗು, ಬಾಳೆ, ಗೇರು, ಸಾಗುವಾನಿ, ಸೇರಿದಂತೆ ಅಪಾರ ಕೃಷಿಗೆ ಮತ್ತು ೪ ಮನೆಗಳಿಗೆ ಭಾಗಃಶ ಹಾನಿಯಾಗಿದೆ. ಇದರಿಂದ ಸುಮಾರು 50 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ತಾಯಿ ಮಗಳಿಗೆ ಗಾಯ: ಹಳ್ಳಿ ಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬ್ಬಿನಲ್ಲೇ ಕಟ್ಟಿನಾಡಿ ಮಮತಾ ಎಂಬವರ ಮನೆ ಮೇಲೆ ಮಂಗಳವಾರ ರಾತ್ರಿ ಮರ ಬಿದ್ದು ಮನೆ ಸಂಪೂರ್ಣ ಹಾನಿಗೊಂಡಿದೆ. ಇದರಿಂದ ಮನೆಯೊಳಗೆ ಇದ್ದ ಮಮತಾ ಹಾಗೂ ಅವರ ಮಗಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಂದಾಯ ಅಧಿಕಾರಿ ಶೋಭಾಲಕ್ಷೀ, ಕಂದಾಯ ನೀರಿಕ್ಷಕ ರಾಘವೇಂದ್ರ, ಗ್ರಾಮಲೆಕ್ಕಿಗ ಕಿರಣ್, ಗ್ರಾಮ ಸಹಾಯಕ ಕೃಷ್ಣ ಪೂಜಾರಿ, ಗ್ರಾಪಂ ಅಧ್ಯಕ್ಷ ರಾಜೇಶ್ ಹೆಬ್ಬಾರ್, ಸದಸ್ಯರಾದ ಸುಧಾಕರ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕಾಮತ್, ಅರಣ್ಯ ಇಲಾಖೆಯ ಶಿವಕುಮಾರ್, ಮುಖಂಡ ರಾದ ಸಂಪಿಗೇಡಿ ಸಂಜೀವ ಶೆಟ್ಟಿ, ರೋಹಿತ್ ಶೆಟ್ಟಿ ಮೊದಲಾದವರು ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು.