ಉಡುಪಿ ಎಪಿಎಂಸಿ ಪ್ರಾಂಗಣದಲ್ಲಿನ ನಿವೇಶನ ಮಾರಾಟದ ವಿರುದ್ಧ ವರ್ತಕರ ಪ್ರತಿಭಟನೆ
ಕಪ್ಪು ಬಾವುಟ ಪ್ರದರ್ಶನ, ಉರುಳು ಸೇವೆ; ಮೂವರು ತೀವ್ರ ಅಸ್ವಸ್ಥ
ಉಡುಪಿ: ಉಡುಪಿ ಎಪಿಎಂಸಿ ಪ್ರಾಂಗಣದಲ್ಲಿ ನಿವೇಶನ ಮಾರಾಟಕ್ಕೆ ಸಂಬಂಧಿಸಿ ಸರ್ವೇ ನಡೆಸಲು ಮುಂದಾದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ವರ್ತಕರು ಇಂದು ಕಪ್ಪು ಬಾವುಟ ಪ್ರದರ್ಶಿಸಿ ಉರುಳು ಸೇವೆ ನಡೆಸಿ ಪ್ರತಿಭಟಿಸಿದರು. ಇದರಿಂದ ಮೂರು ವರ್ತಕರು ತೀವ್ರ ಅಸ್ವಸ್ಥ ಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಪಿಎಂಸಿ ಗೆ ಸಂಬಂಧಿಸಿದ ನಿವೇಶನವನ್ನು 11 ಮಂದಿಗೆ ಲೀಸ್ ಕಮ್ ಸೇಲ್ ವ್ಯವಸ್ಥೆಯಲ್ಲಿ ಮಾರಾಟ ಮಾಡಲಾಗಿದ್ದು ಇದಕ್ಕೆ ಕೆಲವು ವರ್ತಕರು ಕಳೆದ ಕೆಲವು ವರ್ಷಗಳಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಿವೇಶನದಲ್ಲಿದ್ದ ವರ್ತಕರ ಶೆಡ್ ಗಳನ್ನು ತೆರವುಗೊಳಿಸುವ ಹಿನ್ನೆಲೆಯಲ್ಲಿ ಇಂದು ಸರ್ವೆ ನಡೆಸಲು ಮುಂದಾದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ವರ್ತಕರು ಪ್ರತಿಭಟನೆ ನಡೆಸಿದರು.
ಎಪಿಎಂಸಿ ಪ್ರಾಂಗಣದಲ್ಲಿ ವರ್ತಕರು ಕಪ್ಪು ಬಾವುಟ ಪ್ರದರ್ಶಿಸಿ ಉರುಳು ಸೇವೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕೆಲವು ವರ್ತಕರು ತೀವ್ರ ಅಸ್ವಸ್ಥಗೊಂಡಿದ್ದು ಕೂಡಲೇ ಆಂಬುಲೆನ್ಸ್ ಮೂಲಕ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಗೋಪಾಲ ಕಾಕನೂರು ಅವರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೆ ಹೋರಾಟ ಕೈ ಬಿಡಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.