ತ್ರಾಸಿ: ಸಮುದ್ರಪಾಲಾಗಿದ್ದ ಜೆಟ್ ಸ್ಕೀ ರೈಡರ್ ಮೃತದೇಹ ಪತ್ತೆ
ಕುಂದಾಪುರ: ತ್ರಾಸಿ ಬೀಚ್ ನಲ್ಲಿ ಶನಿವಾರ ಸಂಜೆ ಪ್ರವಾಸಿಗನನ್ನು ಕರೆದೊಯ್ಯತಿದ್ದ ಜೆಟ್ಸ್ಕೀ ಅಪಘಾತಕ್ಕೀಡಾಗಿ ನಾಪತ್ತೆಯಾಗಿದ್ದ ಜೆಟ್ ಸ್ಕೀ ರೈಡರ್ ರೋಹಿದಾಸ್ ಯಾನೆ ರವಿ (41)ಯವರ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ.
ಘಟನೆ ನಡೆದ 36 ಗಂಟೆಗಳ ಬಳಿಕ ಇಲ್ಲಿನ ಹೊಸಪೇಟೆ ರುದ್ರ ಭೂಮಿಯ ಹಿಂಭಾಗದ ಸಮುದ್ರ ತೀರದಲ್ಲಿ ಪತ್ತೆ ಆಗಿದೆ.
ಸ್ಥಳೀಯ ಮೀನುಗಾರರಾದ ಶಾಸ ಖಾರ್ವಿ ಹಾಗೂ ಮೋಹನ ಖಾರ್ವಿ ಇವರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಮೀನುಗಾರಿಕೆ ತೆರಳಿದ ವೇಳೆ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ್ದಾರೆ. ಅವರು ಸ್ಥಳೀಯ ಕರಾವಳಿ ಕಾವಲು ಪಡೆಯ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿ ನಿಶಾಂತ್ ಖಾರ್ವಿ ಗೆ ಮಾಹಿತಿ ನೀಡಿದ್ದರು. ಮೂವರು ಸೇರಿ ತೇಲುತ್ತಿದ್ದ ಮೃತದೇಹವನ್ನು ಮೇಲೆಕ್ಕೆ ತಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಂಗೊಳ್ಳಿ 24x 7 ಆ್ಯಂಬುಲೆನ್ಸ್ ನ ಇಬ್ರಾಹೀಂ ಗಂಗೊಳ್ಳಿ, ಕೆ ಎನ್ ಡಿ ಸಿಬ್ಬಂಧಿ ನಿಶಾಂತ್ ಖಾರ್ವಿ, ಬೀಚ್ ಉಸ್ತುವಾರಿ ಸಿಬ್ಬಂದಿ ಸುರೇಶ್ ಕೊಡೇರಿ, ಮೃತ ರೊಹಿದಾಸ್ ಸಹದ್ಯೋಗಿಗಳು ಮೃತದೇಹವನ್ನು ತೀರದಿಂದ ಸಾಗಿಸಲು ಸಹಕರಿಸಿದರು.
ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್ ನ ಜೆಟ್ ಸ್ಕೀ ಬೋಟ್ ನಲ್ಲಿ ಸ್ಕೀ ರೈಡರ್ ಆಗಿದ್ದ ರೋಹಿದಾಸ್ ಶನಿವಾರ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸುತ್ತಿದ್ದರು. ಈ ವೇಳೆ ರೈಡರ್ ನಿಯಂತ್ರಣ ತಪ್ಪಿ ಜೆಟ್ಸ್ಕೀ ಮಗುಚಿ ಬಿದ್ದಿತ್ತು. ಈ ವೇಳೆ ಪ್ರವಾಸಿಗ ಪಾರಾಗಿದ್ದರೆ, ರೋಹಿದಾಸ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದರು.