ಉಡುಪಿ: ಏಜೆಂಟ್‌ಗಳಿಂದ ಕಂಪೆನಿಯ 24 ಲಕ್ಷ ರೂ. ವಂಚನೆ; ಪ್ರಕರಣ ದಾಖಲು
ಉಡುಪಿ, ನ.4: ಕಂಪೆನಿಯೊಂದರ ಲಕ್ಷಾಂತರ ರೂ. ಹಣವನ್ನು ಏಜೆಂಟ್ ಗಳು ದುರುಪಯೋಗಪಡಿಸಿಕೊಂಡು ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಉಡುಪಿಯ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ್ ಬ್ಯುಸಿನೆಲ್ ಸೆಲ್ಯುಶನ್ ಪ್ರೈವೆಟೆಡ್ ಎಂಬ ಕಂಪೆನಿಯ ಸತೀಶ್ ರಾವ್ ಎಂಬವರು 2018ನೇ ಸಾಲಿನಲ್ಲಿ ಹರಿಯಾಣ ರಾಜ್ಯದ ಗುರ್ಗಾಂ ಜಿಲ್ಲೆಯಲ್ಲಿ ತನ್ನ ಕಂಪೆನಿಯ ಸಬ್ ಬ್ರಾಂಚ್ ತೆರೆದಿದ್ದರು. ಇವರು ಈ ಕಂಪೆನಿಯಲ್ಲಿ ಸಾಹಿಪೇ ಎಂಬ ಆನ್‌ಲೈನ್ ಹಣ ವರ್ಗಾವಣೆ ಮಾಡುವ ವೇದಿಕೆಯನ್ನು ಹಲವಾರು ಬ್ಯಾಂಕ್‌ಗಳಿಗೆ ಒದಗಿಸುತಿದ್ದರು.
ಆರೋಪಿಗಳಾದ ಅಸ್ಸಾಂನ ಶಾಹಾ ಆಲೊಮ್(23), ಜಾರ್ಖಂಡ್‌ನ ಎಂ.ಡಿ.ಜುನೈದ್ ಅನ್ಸಾರಿ(24), ಬಿಹಾರದ ನಜ್ರೀಮ್ ಪ್ರವೀಣ್(27), ಎಂ.ಡಿ.ಇನಾಯತ್(18), ಎಂ.ಡಿ.ದಿಲ್ನಾವಾಜ್(21), ಕಿರಣ್ ದೇವಿ(33), ಬೀಬಿ ನುರಾಸ್ದಿ(54), ಎಂ.ಡಿ. ಶೊರಬ್(42), ಪಶ್ಚಿಮ ಬಂಗಾಳದ ತುಫಾನ್ ಸಿಂಗ್(32), ಎಂ.ಡಿ.ಇಫ್ತಿಕಾರ್(26), ಮಧ್ಯಪ್ರದೇಶದ ಲಕ್ಷ್ಮೀಬಾಯ(48), ಎಂಬವರು ಈ ಕಂಪೆನಿಯಲ್ಲಿ ಡಿಸ್ಟ್ರಿಬ್ಯೂಟರ್ ಹಾಗೂ ಏಜೆಂಟ್‌ಗಳಾಗಿ ನೊಂದಾಯಿಸಿಕೊಂಡು ಬಿಹಾರ್ ಹಾಗೂ ಇನ್ನಿತರ ರಾಜ್ಯಗಳಲ್ಲಿ ಕಂಪೆನಿಯ ವಹಿವಾಟು ನಡೆಸಿಕೊಂಡಿದ್ದರು.
ಆದರೆ ಇವರೆಲ್ಲ ಒಳಸಂಚು ನಡೆಸಿ, ಕಾನೂನು ಬಾಹಿರ ಲಾಭಕ್ಕಾಗಿ 2023ನೇ ಮಾರ್ಚ್ ಹಾಗೂ ಎಪ್ರಿಲ್ ತಿಂಗಳಿನಲ್ಲಿ ಬಿಹಾರ್ ಹಾಗೂ ಇನ್ನಿತರ ರಾಜ್ಯಗಳಲ್ಲಿ ಅನಧೀಕೃತವಾಗಿ ಸಾರ್ವಜನಿಕರ ಆಧಾರ್ ಕಾರ್ಡ್ ವಿವರ ಪಡೆದು, ಕಂಪೆನಿಯ ಪಿಓಎಸ್ ಮೆಷಿನ್‌ನಿಂದ ಆನ್‌ಲೈನ್‌ನಲ್ಲಿ ಒಟ್ಟು 24,14,636ರೂ. ಹಣವನ್ನು ವರ್ಗಾವಣೆ ಮಾಡಿ, ದುರುಪಯೋಗ ಪಡಿಸಿ ಕೊಂಡು ವಂಚನೆ ಮಾಡಿದ್ದಾರೆಂದು ದೂರಲಾಗಿದೆ.