ಉಡುಪಿ: ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ 30 ವರ್ಷ ಕಠಿಣ ಜೈಲುಶಿಕ್ಷೆ
ಉಡುಪಿ, ಅ.18: ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ವರ್ಷಗಳ ಹಿಂದೆ ನಡೆದ ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ನ್ಯಾಯಾಲಯವು ಇಂದು ಆದೇಶಿಸಿದೆ.
ಬೈಂದೂರು ತಾಲೂಕಿನ ಹೆರಂಜಾಲು ಗ್ರಾಮದ ಗಿರೀಶ್(24) ಶಿಕ್ಷೆಗೆ ಗುರಿಯಾದ ಆರೋಪಿ. 15 ವರ್ಷ ವಯಸ್ಸಿನ ನೊಂದ ಬಾಲಕಿ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸಮಾಡಿಕೊಂಡಿದ್ದು, ತನ್ನ ತಾಯಿ ಮನೆಗೆ ಹೋಗಿ ಬರುತ್ತಿರುವ ವೇಳೆ ನೆರೆಮನೆಯ ಗಿರೀಶ್ ನೊಂದ ಬಾಲಕಿಯನ್ನು ಪರಿಚಯ ಮಾಡಿಕೊಂಡು ಪ್ರೀತಿಸುತ್ತೇನೆಂದು ತಿಳಿಸಿದ್ದನು.
2021ರ ಆಗಸ್ಟ್ ತಿಂಗಳಲ್ಲಿ ಬೈಕ್‌ನಲ್ಲಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಆತ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದನು. ಆಕೆಯ ದೇಹದ ಬದಲಾವಣೆಯನ್ನು ಗಮನಿಸಿದ ಆಕೆಯ ಚಿಕ್ಕಮ್ಮ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಆಕೆ ಗರ್ಭಿಣಿಯಾಗಿರುವ ವಿಚಾರ ತಿಳಿದುಬಂತು. ಅದರಂತೆ ನೊಂದ ಬಾಲಕಿ ನೀಡಿದ ದೂರಿನಂತೆ ಅಂದಿನ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್.ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಒಟ್ಟು 24 ಸಾಕ್ಷಿಗಳ ಪೈಕಿ 14 ಸಾಕ್ಷಿಗಳ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ನೊಂದ ಬಾಲಕಿಯು ಅಭಿಯೋಜನೆಗೆ ಪೂರಕ ಸಾಕ್ಷಿ ನೀಡಿದ್ದು, ಸಾಂದರ್ಭಿಕ ಸಾಕ್ಷಿ ಮತ್ತು ಡಿಎನ್‌ಎ ವರದಿ ಕೂಡ ಅಭಿಯೋಜನೆಗೆ ಪೂರಕವಾಗಿ ಸಾಕ್ಷಿ ನುಡಿದಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಯು ದೌರ್ಜನ್ಯ ಎಸಗಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಗೆ ಅತ್ಯಾಚಾರ ಪ್ರಕರಣಕ್ಕೆ 10 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ.ದಂಡ, ಆಕೆ ಗರ್ಭವತಿಯಾಗಲು ಕಾರಣವಾಗಿದ್ದಕ್ಕೆ 20 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿ ಆದೇಶ ನೀಡಿದರು.
ದಂಡ ತೆರಲು ತಪ್ಪಿದರೆ ಒಂದು ವರ್ಷ ಹೆಚ್ಚುವರಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ದಂಡದ ಮೊತ್ತದಲ್ಲಿ 5 ಸಾವಿರ ರೂ. ಸರಕಾರಕ್ಕೆ, 15 ಸಾವಿರ ರೂ. ನೊಂದ ಬಾಲಕಿಗೆ ಮತ್ತು ಸರಕಾರದಿಂದ ನೊಂದ ಬಾಲಕಿಗೆ 20 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದಾರೆ.