ಉಡುಪಿ: ಎಪಿಎಂಸಿ ಅಧಿಕಾರಿಗಳ ವಿರುದ್ಧ ಅಹೋರಾತ್ರಿ ಧರಣಿ ಆರಂಭ
ಉಡುಪಿ, ನ.29: ಉಡುಪಿ ಎಪಿಎಂಸಿಯ ಅಧಿಕಾರಿಗಳು ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉಡುಪಿ ಎಪಿಎಂಸಿ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ಆದಿಉಡುಪಿಯ ಎಪಿಎಂಸಿ ಪ್ರಾಂಣಗದ ಎದುರು ಇಂದಿನಿಂದ ಅಹೋರಾತ್ರಿ ಧರಣಿ ಆರಂಭಗೊಂಡಿತು.
ಒಂದು ನಿವೇಶನಕ್ಕೆ 8 ಲಕ್ಷ ರೂ.ನಂತೆ 11 ನಿವೇಶನಗಳಿಗೆ 88 ಲಕ್ಷ ರೂ. ಲಂಚ ಪಡೆದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಕ್ಯಾನ್ಸರ್ ಪೀಡಿತ ವರ್ತಕನಿಂದ 250 ರೂ.ನ ಪರವಾನಿಗೆಗೆ 40 ಸಾವಿರ ರೂ. ಲಂಚ ಪಡೆದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಮರಣ ಹೊಂದಿ ಮೂರು ವರ್ಷಗಳಾದರೂ ಇಂದಿಗೂ ಆ ವ್ಯಕ್ತಿಯ ಹೆಸರಿನಲ್ಲೇ ಗೋಡೌನ್ ನ ಬಾಡಿಗೆ ಪಡೆಯುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಉಡುಪಿ ಎಪಿಎಂಸಿಯಲ್ಲಿ ಮೂಲಭೂತ ಸೌಕರ್ಯವಾದ ರಸ್ತೆ, ವಿದ್ಯುತ್, ಶೌಚಾಲಯ, ನೀರು ಮತ್ತು ಸ್ವಚ್ಛತೆಯನ್ನು ಮಾಡಿಕೊಟ್ಟಿಲ್ಲ. ಅಂಗಡಿ, ಗೋಡೌನ್, ಏಲಂ ಕಟ್ಟೆಯಿಂದ ಎಪಿಎಂಸಿ ಅಧಿಕಾರಿಗಳಿಗೆ ಬರುವ ಒಂದು ತಿಂಗಳ ಆದಾಯ 12.50 ಲಕ್ಷ ರೂ.ವಾದರೂ ಸರಕಾರಕ್ಕೆ ಕೇವಲ 4.5 ಲಕ್ಷ ರೂ.ವನ್ನು ತೋರಿಸುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸಮಿತಿಯ ಅಧ್ಯಕ್ಷ ವಿಜಯ ಕೊಡವೂರು ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಸುಭಾಷಿತ್ ಕುಮಾರ್, ಎಪಿಎಂಸಿ ಮಾಜಿ ಸದಸ್ಯ ರಮಾಕಾಂತ್ ಕಾಮತ್, ರೈತ ಮೋರ್ಚಾ ರಾಜ್ಯ ಸಮಿತಿಯ ಸದಸ್ಯ ರಾಘವೇಂದ್ರ ಉಪ್ಪೂರು, ಹಣ್ಣು ತರಕಾರಿ ಮತ್ತು ದಿನಸಿ ವರ್ತಕರ ಸಂಘದ ಜೊತೆ ಕಾರ್ಯದರ್ಶಿ ಫಯಾಝ್ ಅಹ್ಮದ್, ಸಮಿತಿಯ ಉಪಾಧ್ಯಕ್ಷ ಪ್ರಭುಗೌಡ, ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಮಾಜಿ ಸದಸ್ಯ ಪಾಡುರಂಗ ಮಲ್ಪೆ, ರಶ್ಮಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.