ಉಡುಪಿ ಪ್ರೇರಣೆಯಾಗಿ ಅನ್ಯರಾಜ್ಯದಲ್ಲಿ ರೈಲ್ವೆ ನಿಲ್ದಾಣ ಸ್ವಚ್ಛತೆ: ಸಿಂಧ್ಯಾ
ಉಡುಪಿ : ಜಿಲ್ಲೆಯ ಸ್ಕೌಟ್ಸ್- ಗೈಡ್ಸ್ ರೋವರ್ಸ್ ರೇಂಜರ್ಸ್ ಮಕ್ಕಳು ಉಡುಪಿಯ ರೈಲ್ವೇ ನಿಲ್ದಾಣದಲ್ಲಿ ನಡೆಸುವ ಸ್ವಚ್ಛತ ಸೇವೆಯನ್ನು ಪ್ರೇರಣೆಯಾಗಿ ತೆಗೆದುಕೊಂಡು ಬಿಹಾರ, ಮಧ್ಯ ಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಲ್ಲಿಯೂ ಈ ಯೋಜನೆ ರೂಪಿಸಲಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಪದವಿಪೂರ್ವ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಶ್ರಯದಲ್ಲಿ ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನ ರಹಿತ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಶನಿವಾರ ಉಡುಪಿ ಸರಕಾರಿ ಬಾಲಕಿ ಯರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ರೋವರಿಂಗ್ ಮತ್ತು ರೇಂಜರಿಂಗ್ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಉಡುಪಿ ರೋವರ್ಸ್ ರೇಂಜರ್ಸ್ ಮಕ್ಕಳು ಕಳೆದ 60 ತಿಂಗಳಲ್ಲಿ 60 ಬಾರಿ ರೈಲ್ವೇ ನಿಲ್ದಾಣದ ಸ್ವಚ್ಛತೆಯ ಕಾರ್ಯದಲ್ಲಿ ಭಾಗವಹಿಸಿ ದಾಖಲೆ ಬರೆದಿದ್ದಾರೆ. ಉಡುಪಿ ಮಕ್ಕಳಲ್ಲಿರುವ ಶಿಸ್ತು, ಸ್ವಚ್ಛತೆಯ ಅರಿವು, ಸಾಮಾಜಿಕ ಕಳಕಳಿ ಮಾದರಿ ಯಾಗಿದೆ. ಸಾಹಸಿ ಪ್ರವೃತ್ತಿಯ ಯುವ ಜನರು ರೂಪುಗೊಳ್ಳುತ್ತಿದ್ದಾರೆ. ಸ್ಕೌಟ್ಸ್- ಗೈಡ್ಸ್ ಶಿಕ್ಷಣ ಮನುಷ್ಯನನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತದೆ ಎಂದು ಅವರು ತಿಳಿಸಿದರು.
ಶಿಬಿರವನ್ನು ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಉದ್ಘಾಟಿಸಿ ದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಎಂ.ಭಟ್, ಶಿಬಿರದ ನಾಯಕ ಗುರುಮೂರ್ತಿ ನಾಯ್ಕಪು ಎಲ್.ಟಿ., ಜಿಲ್ಲಾ ಸ್ಕೌಟ್ ಆಯುಕ್ತ ಡಾ.ವಿಜಯೇಂದ್ರ ವಸಂತ್ ರಾವ್, ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ, ಜಿಲ್ಲಾ ಕಾರ್ಯದರ್ಶಿ ಆನಂದ ಬಿ.ಅಡಿಗ, ಜತೆ ಕಾರ್ಯದರ್ಶಿ ಫ್ಲೋರಿನ್ ನರೋನ್ಹಾ, ಸಂಘಟನಾ ಆಯುಕ್ತೆ ಸುಮನಾ ಶೇಖರ್ ಮೊದಲಾದವರು ಉಪಸ್ಥಿತರಿದ್ದರು.