ಉಡುಪಿ ಕಾಲೇಜು ವಿವಾದ: ಮುಸ್ಲಿಂ ಬಾಂಧವ್ಯ ವೇದಿಕೆ ಖಂಡನೆ
ಉಡುಪಿ: ಇಲ್ಲಿನ ಕಾಲೇಜೊಂದರಲ್ಲಿ ನಡೆದಿದೆಯೆನ್ನಲಾದ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಕೆಲವು ಶಕ್ತಿಗಳು ಬಳಸಿಕೊಂಡು ಸಾಮಾಜಿಕ ಸಾಮರಸ್ಯ ಹದೆಗೆಡಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ತಿಳಿಸಿದೆ.
ಇಲ್ಲಿನ ಮುಸ್ಲಿಮರು ಹಿಂದೂಗಳು ಸೇರಿದಂತೆ ಸಹಧರ್ಮೀಯರೊಂದಿಗೆ ಕಾಲಗಳಿಂದ ಸೌಹಾರ್ದದಿಂದ ಬಾಳುತ್ತಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಕೆಲವು ರಾಜಕೀಯ ಪ್ರೇರಿತ ಶಕ್ತಿಗಳು ತಮ್ಮ ಸ್ವಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ವೈಯುಕ್ತಿಕ ನೆಲೆಯ ಅಪರಾಧಗಳನ್ನು ಸಮುದಾಯದ ತಲೆಗೆ ಕಟ್ಟಿ ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿ ವಾಮಮಾರ್ಗದ ರಾಜಕಾರಣ ಮಾಡುತ್ತಿದ್ದಾರೆ.
ದೇಶದಲ್ಲಿ ಬೇರೆ ಯಾವುದೇ ಸಮುದಾಯದ ವ್ಯಕ್ತಿಗಳ ಮೇಲಿನ ಆರೋಪ ಅಥವಾ ಅಪರಾಧಗಳು ಒಂದಿಡೀ ಸಮುದಾಯದ ಮೇಲೆ ಹೀಗೆ ಸಾಮೂಹಿಕವಾಗಿ ಹೇರಲ್ಪಡುವುದಿಲ್ಲ. ಅಪರಾಧಗಳನ್ನು ಹೀಗೆ ಧರ್ಮೀಕರಣಗೊಳಿಸುವುದು ವಿಕೃತಿ. ಆದರೆ ಬರೀ ಮುಸ್ಲಿಂ ಸಮುದಾಯದ ಮೇಲೆ ಮಾತ್ರ ಹೀಗಿನ ಶೋಷಣೆಯನ್ನು ಕೆಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ನಿರಂತರ ನಡೆಸಿಕೊಂಡು ಬರುತ್ತಿವೆ. ಇದು ಖಂಡನೀಯ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸಿದರೆ ಈ ಕುರಿತು ರಾಜ್ಯಾದ್ಯಂತವಿರುವ ಧಾರ್ಮಿಕ ನಾಯಕರು, ಮಠಾಧೀಶರು, ಚಿಂತಕರು, ಲೇಖಕರು ಸೇರಿದಂತೆ ಸಾಮಾಜಿಕ ಜವಾಬ್ದಾರಿಯಿರುವ ಸಮಾನ ಮನಸ್ಕರೊಂದಿಗೆ ವೇದಿಕೆಯು ಮಾತುಕತೆ ನಡೆಸಲಿದೆ ಎಂದು ಮುಸ್ಲಿಂ ಬಾಂಧವ್ಯ ವೇದಿಕೆಯ ಅಧ್ಯಕ್ಷರಾದ ಅನೀಸ್ ಪಾಶಾ ಮತ್ತು ಕಾರ್ಯದರ್ಶಿ ಮುಷ್ತಾಕ್ ಹೆನ್ನಾಬೈಲ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.