ಉಡುಪಿ: ವಿಪಕ್ಷಗಳ ಕೈಗೂಸಾಗಿರುವ ಗ್ರಾಮ ಒನ್ ಪ್ರಾಂಚೈಸಿ ರದ್ಧತಿಗೆ ಸಿಎಂಗೆ ಕಾಂಗ್ರೆಸ್ ಮನವಿ
ಉಡುಪಿ, ಆ.1: ಜಿಲ್ಲೆಯ ಹಲವಾರು ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿಯನ್ನು ಅರ್ಪಿಸಲಾಯಿತು.
ನೆರೆ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು. ಜಿಲ್ಲೆಗೆ ಹೆಚ್ಚು ನಿಧಿಯನ್ನು ಪ್ರಾಕೃತಿಕ ವಿಕೋಪ ಪರಿಹಾಕ್ಕಾಗಿ ಮೀಸಲಿರಿಸಬೇಕು. ಗ್ರಾಮ ಒನ್ ಪ್ರಾಂಚೈಸಿ ವಿಪಕ್ಷಗಳ ಕೈಗೂಸಾಗಿದ್ದು, ಈ ನೇಮಕಾತಿಯನ್ನು ರದ್ದುಪಡಿಸಿ ಹೊಸ ನೇಮಕ ಮಾಡ ಬೇಕು. ಅವೈಜ್ಞಾನಿಕವಾಗಿರುವ ಜಿಪಂ ಮತ್ತು ತಾಪಂ ಕ್ಷೇತ್ರ ವಿಂಗಡನೆಯನ್ನು ಸರಿಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯ ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕು. ತೆಂಗು ಮತ್ತು ಅಡಿಕೆ ಬೆಳೆಗೆ ತಗುಲಿರುವ ಹಳದಿ ಮತ್ತು ಕೊಳೆರೋಗ ಬಾಧೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು. ಅವೈಜ್ಞಾನಿಕ ಕಸ್ತೂರಿರಂಗನ್ ವರದಿಯನ್ನು ನಿರ್ದಿಷ್ಟ ಸ್ಥಳಕ್ಕೆ ಸೀಮಿತಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಜಯಕುಮಾರ್, ನರಸಿಂಹಮೂರ್ತಿ, ಹರೀಶ್ ಕಿಣಿ, ಮಹಾಬಲ ಕುಂದರ್, ಎಲ್ಲೂರು ಶಶಿಧರ ಶೆಟ್ಟಿ, ದಿನೇಶ್ ಪುತ್ರನ್, ರೋಶನ್ ಶೆಟ್ಟಿ, ದಿವಾಕರ್ ಕುಂದರ್, ಉದ್ಯಾವರ ನಾಗೇಶ್ ಕುಮಾರ್, ವೆರೋನಿಕ ಕರ್ನೇಲಿಯೋ, ಡಾ.ಸುನೀತಾ ಶೆಟ್ಟಿ, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್, ರಮಾನಂದ ಪೈ, ಆನಂದ ಪೂಜಾರಿ, ಕಿಶೋರ್ ಕುಮಾರ್ ಎರ್ಮಾಳ್, ಪ್ರಶಾಂತ ಜತ್ತನ್ನ, ಕೀರ್ತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.