ಉಡುಪಿ: ಮುಂದುವರಿದ ಮುಷ್ಕರ; ಶನಿವಾರ ಪ್ರತಿಭಟನಾ ಜಾಥ, ಧರಣಿ
ಉಡುಪಿ, ಸೆ.28: ಪರವಾನಿಗೆ ರಹಿತ ಕಟ್ಟಡ ಸಾಮಗ್ರಿ ಸಾಗಾಟ ವಾಹನ ಗಳನ್ನು ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸಿ ಪ್ರಕರಣ ದಾಖಲಿಸುತ್ತಿರುವುದನ್ನು ವಿರೋಧಿ ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಸಾಗಾಟ ಲಾರಿ,ಟೆಂಪೊ ಮಾಲಕರ ಸಂಘಟನೆಗಳ ಒಕ್ಕೂಟ ಜಿಲ್ಲೆಯಾದ್ಯಂತ ನಿನ್ನೆ ಪ್ರಾರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದು ಮುಂದುವರಿದಿದೆ.
ಇಂದು ಕಾರ್ಕಳ, ಕೋಟ, ಬ್ರಹ್ಮಾವರಗಳಲ್ಲಿ ಬೃಹತ್ ಪ್ರತಿಭಟನಾ ಸಭೆಗಳು ನಡೆದವು. ಉಡುಪಿಯಲ್ಲಿ ಕಟಪಾಡಿ ವಲಯ ಸಂಘಟನೆಯ ಪದಾಧಿಕಾರಿಗಳು ಕಟಪಾಡಿ ಪೇಟೆಬೆಟ್ಟು ಕೊರಗಜ್ಜನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ತಮ್ಮನ್ನು ಈ ದುಸ್ಥಿತಿಗೆ ತಳ್ಳಿದವರಿಗೆ ಪಾಠ ಕಲಿಸುವಂತೆ, ತಮ್ಮ ಹೋರಾಟಕ್ಕೆ ಜಯಸಿಗುವಂತೆ ಕೋರಿಕೊಂಡರು ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆಯಂತೆ ಇಂದು ಸಹ ಸಾವಿರಾರು ಸಂಖ್ಯೆಯ ಲಾರಿ ಹಾಗೂ ಟೆಂಪೋಗಳನ್ನು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳ ಬದಿಗಳಲ್ಲಿ ನಿಲ್ಲಿಸಲಾಗಿತ್ತು. ಇಂದು ಇನ್ನಷ್ಟು ಮಂದಿ ಮಾಲಕರು ಹಾಗೂ ಚಾಲಕರು ತಮ್ಮ ಲಾರಿ ಮತ್ತು ಟೆಂಪೊಗಳನ್ನು ನಿಲ್ಲಿಸಿ ಮುಷ್ಕರದಲ್ಲಿ ಪಾಲ್ಗೊಂಡರು ಎಂದು ಒಕ್ಕೂಟದ ಪ್ರಮುಖ ರಾಘವೇಂದ್ರ ಶೆಟ್ಟಿ ತಿಳಿಸಿದರು.
ಶನಿವಾರ ಪ್ರತಿಭಟನಾ ರ್ಯಾಲಿ: ಸಂಘಟನೆ ಶುಕ್ರವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಜಾಥಾ ಹಾಗೂ ಧರಣಿ ಯನ್ನು ಅಧಿಕಾರಿಗಳ ಕೋರಿಕೆ ಮೇರೆಗೆ ನಾಳಿನ ರಾಜ್ಯ ಬಂದ್‌ನ ನಿಮಿತ್ತ ಒಂದು ದಿನ ಮುಂದೂಡಲಾಗಿದೆ. ಈ ರ್ಯಾಲಿ ಶನಿವಾರ ನಡೆಯಲಿದೆ ಎಂದು ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.
ಅದರಂತೆ ಶನಿವಾರ ಬೆಳಗ್ಗೆ ಉಡುಪಿಯ ಜೋಡುಕಟ್ಟೆಯ ಬಳಿ ಒಟ್ಟು ಸೇರುವ ಲಾರಿ, ಟೆಂಪೋ ಮಾಲಕ, ಚಾಲಕರು ಹಾಗೂ ಇತರ ಕಾರ್ಮಿಕರು ಅಲ್ಲಿಂದ ಕಾಲ್ನಡಿಗೆ ಜಾಥದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ಸಾಗುವರು. ಬಳಿಕ ಅಲ್ಲಿ ಅನಿರ್ದಿಷ್ಟಾವಧಿಯ ಧರಣಿ ಪ್ರಾರಂಭಿಸಲಾ ಗುವುದು ಎಂದು ಅವರು ಹೇಳಿದರು. ಶನಿವಾರದ ಜಾಥದಲ್ಲಿ 3ರಿಂದ 4ಸಾವಿರದಷ್ಟು ವಿವಿಧ ಕಾರ್ಮಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಕಟ್ಟಡ ನಿರ್ಮಾಣದ ಹಾಗೂ ಕಟ್ಟಡ ಸಾಮಗ್ರಿ ಸಾಗಾಟಕ್ಕೆ ಸಂಬಂಧಿಸಿದ ವಿವಿಧ ಸಂಘಟನೆಗಳು ಧರಣಿ ಮುಷ್ಕರದಲ್ಲಿ ಭಾಗವಹಿಸಲಿವೆ ಎಂದೂ ಅವರು ಹೇಳಿದರು.
ಮಾತುಕತೆ ವಿಫಲ
ಧರಣಿ ನಿರತರೊಂದಿಗೆ ಉಡುಪಿ ಜಿಲ್ಲಾಧಿಕಾರಿಯವರು ಇಂದು ಸಂಜೆ ಉಡುಪಿ ಜಿಲ್ಲೆಯ ಐವರು ಶಾಸಕರ ಉಪಸ್ಥಿತಿಯಲ್ಲಿ ಕರೆದಿದ್ದ ಮಾತುಕತೆ ಸಭೆ ವಿಫಲವಾಗಿದೆ. ಎಲ್ಲಾ ಲಾರಿಗಳು ಜಿಪಿಎಸ್‌ನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಡಳಿತ ಸೂಚಿಸಿದೆ. ಮುಂದಿನ ಕ್ರಮದ ಬಗ್ಗೆ ಒಕ್ಕೂಟದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ರಾಘವೇಂದ್ರ ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಸಂಘಟನೆಗಳ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಎಸ್ಪಿ ಡಾ.ಅರುಣ್ ಕೆ., ಹಿರಿಯ ಭೂವಿಜ್ಞಾನಿ ಸಂದೀಪ್, ಉಡುಪಿ, ಕಾಪು, ಕಾರ್ಕಳ, ಕುಂದಾಪುರ ಹಾಗೂ ಬೈಂದೂರುಗಳ ಶಾಸಕರು ಉಪಸ್ಥಿತರಿದ್ದರು ಎಂದವರು ಹೇಳಿದರು.