ಉಡುಪಿ: 50 ಮನೆಗಳಿಗೆ, 3 ಕೊಟ್ಟಿಗೆಗಳಿಗೆ ಹಾನಿ; 20 ಲಕ್ಷ ರೂ. ಅಧಿಕ ನಷ್ಟದ ಅಂದಾಜು
ಉಡುಪಿ, ಜು.24: ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ 50ಕ್ಕೂ ಅಧಿಕ ಮನೆಗಳಿಗೆ ಹಾಗೂ ಮೂರು ಜಾನುವಾರು ಕೊಟ್ಟಿಗೆಗಳಿಗೆ ಹಾಗೂ ಬೆಳೆ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾದ ವರದಿಗಳು ಬಂದಿದೆ.
ಕಳೆದ 24ಗಂಟೆಗಳ ಅವಧಿಯಲ್ಲಿ ಕುಂದಾಪುರ ತಾಲೂಕಿನಲ್ಲಿ 10 ಪ್ರಕರಣಗಳು ವರದಿಯಾಗಿದ್ದು 8ಲಕ್ಷ, ಬ್ರಹ್ಮಾವರ ತಾಲೂಕಿನಲ್ಲಿ 12 ಪ್ರಕರಣ ಗಳಲ್ಲಿ 5.25 ಲಕ್ಷ ರೂ., ಬೈಂದೂರಿನ 10 ಪ್ರಕರಣಗಳಿಲ್ಲಿ 4.25 ಲಕ್ಷ ರೂ., ಕಾಪು ತಾಲೂಕಿನ ನಾಲ್ಕು ಪ್ರಕರಣಗಳಲ್ಲಿ 1.85 ಹಾಗೂ ಕಾರ್ಕಳದ ಮೂರು ಪ್ರಕರಣಗಳಲ್ಲಿ 50ಸಾವಿರ ರೂ.ನಷ್ಟವಾಗಿರುವ ಬಗ್ಗೆ ವರದಿಗಳು ಬಂದಿವೆ.
ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ನಾಗರತ್ನ ದೇವಾಡಿಗ ಎಂಬವರ ವಾಸ್ತವ್ಯದ ಮನೆ ಗಾಳಿ-ಮಳೆಗೆ ಸಂಪೂರ್ಣ ಹಾನಿಗೊಂಡಿದ್ದು 5 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ಬ್ರಹ್ಮಾವರ ತಾಲೂಕು ಕೆಂಜೂರಿನ ರಾಮ ಮರಕಾಲ ಎಂಬವರ ಮನೆಯೂ ಗಾಳಿ-ಮಳೆಯಿಂದ ಸಂಪೂರ್ಣ ಹಾನಿಗೊಂಡಿದ್ದು, 2.5 ಲಕ್ಷ ರೂ.ಗಳ ನಷ್ಟ ವಾಗಿರುವುದಾಗಿ ಅಂದಾಜಿಸಲಾಗಿದೆ.
ಬ್ರಹ್ಮಾವರದ ಕೋಡಿ ಗ್ರಾಮದ ರತ್ನಾಕರ ಪೂಜಾರಿ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು, ಒಂದು ಲಕ್ಷ ರೂ. ನಷ್ಟ ವಾಗಿದೆ. ಕುಂದಾಪುರ ತಾಲೂಕು ಕಾವ್ರಾಡಿಯ ಮುತ್ತು ಎಂಬವರ ವಾಸದ ಮನೆಗೆ ಭಾಗಶ: ಹಾನಿಯಾಗಿ 85,000ರೂ. ನಷ್ಟವಾಗಿದೆ.
ಕಾಪು ತಾಲೂಕು ನಂದಿಕೂರಿನ ಹಮೀದ್ ಎಂಬವರ ಮನೆಗೆ ಹಾಗೂ ಇನ್ನಂಜೆಯ ಶಿವಾನಂದ ಎಂಬವರ ಮನೆಗೆ ತಲಾ 70,000ರೂ., ಉಡುಪಿ ಬೆಳ್ಳಂಪಳ್ಳಿ ರಾಮದ ಶ್ರೀನಿವಾಸ ನಾಯ್ಕರ ಮನೆಗೆ 60,000, ಕಡೆಕಾರು ಗ್ರಾಮದ ರಾಜೇಶ್ ಶೆಟ್ಟಿಗಾರ್ ಮನೆಗೆ ಹಾಗೂ ಬೈಂದೂರು ತಾಲೂಕು ಪಡುವರಿ ಗ್ರಾಮದ ಗಣಪತಿ ಅವರ ಮನೆಗೆ ತಲಾ 50,000ರೂ. ನಷ್ಟವಾಗಿದೆ ಎಂದು ವರದಿಗಳು ತಿಳಿಸಿವೆ.
ಅದೇ ರೀತಿ ಬೈಂದೂರು ತಾಲೂಕು ಪಡುವರಿ ಗ್ರಾಮದ ಬೀಚು, ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ರಾಮ ಮರಕಾಲ ಮತ್ತು ಕಾವಡಿ ಗ್ರಾಮದ ರವಿ ಎಂಬವರ ಮನೆಯ ಜಾನುವಾರು ಕೊಟ್ಟಿಗೆಗೆ ಹಾನಿಯಾಗಿದ್ದು, ಒಟ್ಟು 30000ರೂ. ನಷ್ಟದ ಅಂದಾಜು ಮಾಡಲಾಗಿದೆ.