ಉಡುಪಿ ಜಿಲ್ಲೆಯಲ್ಲಿ 450 ಕೋಟಿ ರೂ. ವೆಚ್ಚದಲ್ಲಿ 56 ಕಿಂಡಿ ಅಣೆಕಟ್ಟು ನಿರ್ಮಾಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪ, ನ.1: ರಾಜ್ಯ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪಶ್ಚಿಮ ವಾಹಿನಿಯಡಿ ಉಡುಪಿ ಜಿಲ್ಲೆಯಲ್ಲಿ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ 56 ಕಿಂಡಿ ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿ ಅವರು ಮಾತನಾಡುತ್ತಿದ್ದರು.
ಈ ಬಾರಿಯ ಪ್ರಾಕೃತಿಕ ಏರುಪೇರುಗಳಿಂದಾಗಿ ವಾಡಿಕೆ ಮಳೆ ಬಾರದೇ ರಾಜ್ಯದ 220ಕ್ಕೂ ಅಧಿಕ ತಾಲೂಕುಗಳಲ್ಲಿ ಬರದ ಛಾಯೆ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲೂ ಶೇ.25ರಷ್ಟು ಮಳೆಯ ಕೊರತೆಯಾಗಿದೆ. ಇದರಿಂದ ಈಗಾಗಲೇ ಕಾರ್ಕಳ ಹಾಗೂ ಹೆಬ್ರಿ ತಾಲೂಕು ಗಳನ್ನು ಸಂಪೂರ್ಣ ಬರ ಪೀಡಿತ ತಾಲೂಕು ಹಾಗೂ ಬ್ರಹ್ಮಾವರ ತಾಲೂಕನ್ನು ಸಾಧಾರಣ ಬರ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ ಎಂದು ಸಚಿವೆ ಹೇಳಿದರು.
ಕಾರ್ಕಳದಲ್ಲಿ 4,103, ಹೆಬ್ರಿಯಲ್ಲಿ 1,283 ಹಾಗೂ ಬ್ರಹ್ಮಾವರ ದಲ್ಲಿ 8,551ಸೇರಿದಂತೆ ಒಟ್ಟು 13,937 ಹೆಕ್ಟೇರ್ ಪ್ರದೇಶದ ಭತ್ತದ ಬೆಳೆ ಹಾನಿ ಅಂದಾಜಿಸಿದ್ದು, 11.85 ಕೋಟಿ ರೂ. ಪರಿಹಾರಕ್ಕೆ ಅನುದಾನ ನೀಡಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.
ಇದಕ್ಕೆ ಮುನ್ನ ವಿವಿಧ ಶಿಲಾ ಕಾಲೇಜು ವಿದ್ಯಾರ್ಥಿಗಳು, ಪೊಲೀಸ್, ಗೃಹರಕ್ಷಕ ದಳ ಹಾಗೂ ಇಲಾಖೆಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಚಿವರು ಗೌರವ ವಂದನೆ ಸ್ವೀಕರಿಸಿದರು.
ಇದೇ ಸಂದರ್ಭ ಉಸ್ತುವಾರಿ ಸಚಿವರು 29 ಮಂದಿ ಸಾಧಕರಿಗೆ ಹಾಗೂ ಐದು ಸಂಘಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಸನ್ಮಾನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಿರಿ. ಜಿಪಂ ಸಿಇಓ ಪ್ರಸನ್ನ, ಎಸ್ಪಿ ಡಾ.ಅರುಣ್, ಎಡಿಸಿ ಮಮತಾದೇವಿ ಉಪಸ್ಥಿತರಿದ್ದರು.