ಯುವಜನೋತ್ಸವ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ಮ್ಯಾರಥಾನ್
ಉಡುಪಿ, ಆ.27: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ, ಯುವ ಸಬಲೀಕರಣ ಸೇವೆಗಳು, ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ರೆಡ್ ರಿಬ್ಬನ್ ಕ್ಲಬ್ ಮತ್ತು ಉಡುಪಿ ಜಿಲ್ಲಾ ಅಮೆಚುರ್ ಅಥ್ಲೆಟಿಕ್ಸ್ ಅಸೋಸಿಯೇಷನ್, ಜಿಲ್ಲಾ ಸರ್ವೇಕ್ಷಣಾ ಘಟಕ ಎನ್.ಸಿ.ಡಿ ವಿಭಾಗ ಮತ್ತು ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ, ರೋಟರಿ ಕ್ಲಬ್ ಕಲ್ಯಾಣಪುರ ಮತ್ತು ರೋಟರಿ ಕ್ಲಬ್ ಉಡುಪಿ ಮಿಡ್‌ಟೌನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಯುವಜನೋತ್ಸವ 2023-24 ಕಾರ್ಯಕ್ರಮದ ಅಂಗವಾಗಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ 5 ಕಿ.ಮೀವರೆಗೆ ಮ್ಯಾರಥಾನ್ ಓಟವನ್ನು ರವಿವಾರ ಹಮ್ಮಿಕೊಳ್ಳಲಾಗಿತ್ತು.
ಎಚ್.ಐ.ವಿ./ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಎಚ್.ಐ.ವಿ./ಏಡ್ಸ್ ಕಾಯ್ದೆ 2017, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್.ಟಿ.ಐ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿ ಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಏರ್ಪಡಿಸಲಾದ ಓಟದಲ್ಲಿ ಪುರುಷರ ವಿಭಾಗಕ್ಕೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಶಾಂತವೀರ ಶಿವಪ್ಪಹಾಗೂ ಮಹಿಳೆಯರ ವಿಭಾಗಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ್ ಉಡುಪ, ಜಿಲ್ಲಾ ಕಾರ್ಯ ಕ್ರಮ ಅನುಷ್ಠಾನ ಅಧಿಕಾರಿ ಡಾ.ಚಿದಾನಂದ್ ಸಂಜು, ಡಾ.ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ರಾಜೇಂದ್ರ, ದೈಹಿಕ ಶಿಕ್ಷಣ ನಿರ್ದೇಶಕ ಪಾಟ್ಕರ್, ಅಮೆಚೂರ್ ಅಥ್ಲೆಟಿಕ್ ಕಾರ್ಯದರ್ಶಿ ದಿನೇಶ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯದ ಧನುಷ್, ರೋಟರಿ ಕ್ಲಬ್ ಉಡುಪಿ ಮಿಡ್ ಟೌನ್ ಅಧ್ಯಕ್ಷ ಭುಜಂಗ ಶೆಟ್ಟಿ, ರೋಟರಿ ಕ್ಲಬ್ ಕಲ್ಯಾಣಪುರ ಅಧ್ಯಕ್ಷ ದಿವಾಕರ್ ಪೂಜಾರಿ ಉಪಸಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮಂಜುನಾಥ ಗಾಣಿಗ ನಿರೂಪಿಸಿದರು. ಮ್ಯಾರಾಥಾನ್ ಓಟದಲ್ಲಿ ಒಟ್ಟು 348 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮ್ಯಾರಥಾನ್ ಓಟದ ಫಲಿತಾಂಶಗಳು
ಐದು ಕಿಲೋಮೀಟರ್ ಮ್ಯಾರಥಾನ್ ಪುರುಷರ ವಿಭಾಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಪ್ರಯಾಗ ಸಿ.ಶೆಟ್ಟಿ ಪ್ರಥಮ, ಉಡುಪಿ ಬೋರ್ಡ್ ಕಾಲೇಜಿನ ಪ್ರಜ್ವಲ್ ಗೋಣಿ ದ್ವಿತೀಯ, ಉಡುಪಿ ಬೋರ್ಡ್ ಕಾಲೇಜಿನ ನಾಗರಾಜ ಸುರೇಶ ಅರಾವತ ತೃತಿಯ ಬಹುಮಾನವನ್ನು ಪಡೆದುಕೊಂಡರು.
ಮಹಿಳೆಯರ ಐದು ಕಿಲೋ ಮೀಟರ್ ಮ್ಯಾರಥಾನ್ ವಿಭಾಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ನಂದಿನಿ ಎನ್.ಎಸ್. ಪ್ರಥಮ, ನಿಟ್ಟೆ ಎನ್.ಎಸ್.ಎ.ಎಂ. ಕಾಲೇಜಿನ ಪ್ರತಿಕ್ಷ ದ್ವಿತೀಯ, ಉಡುಪಿ ಡಾ ಜಿ ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಚಂದ್ರಿಕಾ ತೃತೀಯ ಬಹುಮಾನವನ್ನು ಗೆದ್ದುಕೊಂಡರು.
ವಿಜೇತರಿಗೆ ಕ್ರಮವಾಗಿ ನಗದು ಬಹುಮಾನ ಪ್ರಥಮ 5,000ರೂ., ದ್ವಿತೀಯ 3,500ರೂ., ತೃತೀಯ 2500ರೂ. ಮತ್ತು ಪುರುಷರ ವಿಭಾಗದಲ್ಲಿ ನಾಲ್ಕು ಸಮಾಧಾನಕರ ಬಹುಮಾನದಲ್ಲಿ ತಲಾ 1ಸಾವಿರ ರೂ. ಮತ್ತು ಮಹಿಳೆಯರಿಗೆ ಮೂರು ಸಮಾಧಾನಕರ ಬಹುಮಾನದಲ್ಲಿ ತಲಾ ಒಂದು ಸಾವಿರ ರೂ. ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.