ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಪರ್ಕಳ ಅಬ್ದುಲ್ಲಾ ಹಾಜಿಗೆ ರಾಜ್ಯೋತ್ಸವ ಗೌರವ
ಉಡುಪಿ, ಅ.31: ಇಲ್ಲಿನ ಖ್ಯಾತ ಸಮಾಜ ಸೇವಕ, ಹಿರಿಯ ಸಾಮಾಜಿಕ ಧಾರ್ಮಿಕ ಧುರೀಣ, ಯಶಸ್ವೀ ಉದ್ಯಮಿ ಹಾಗು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಪರ್ಕಳ ಹಾಜಿ ಅಬ್ದುಲ್ಲಾ ಸಾಹೇಬ್ (80) ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
1943 ನ.16ರಂದು ಕೇರಳದ ನೀಲೇಶ್ವರದಲ್ಲಿ ಕೆ.ಅಹ್ಮದ್ ಮತ್ತು ಅಯಿಶಾ ದಂಪತಿ ಪುತ್ರನಾಗಿ ಜನಿಸಿದ ಇವರು, 1967ರಲ್ಲಿ ತನ್ನ 24ನೇ ವಯಸ್ಸಿನಲ್ಲೇ ಉಡುಪಿಗೆ ಬಂದು ತನ್ನ ವೃತ್ತಿ ಜೀವನವನ್ನು ಆರಂಭಿಸಿದರು. ಮಣಿಪಾಲದ ಡಾ.ಟಿ.ಎ.ಪೈ. ಸಲಹೆ ಹಾಗೂ ಉತ್ತೇಜನದಿಂದ ಸಣ್ಣ ಪ್ರಮಾಣದಲ್ಲಿ ಉದ್ಯಮ ವನ್ನು ಪ್ರಾರಂಭಿಸಿದ ಅಬ್ದುಲ್ಲಾ ಸಾಹೇಬರು, ಕ್ರಮೇಣ ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ವ್ಯವಹಾರದಿಂದ ಉದ್ಯಮವನ್ನು ವಿಸ್ತರಿಸುತ್ತಾ ಉಡುಪಿಯ ಓರ್ವ ಯಶಸ್ವೀ ಉದ್ಯಮಿಯಾಗಿ ಬೆಳೆದರು.
ಮಣಿಪಾಲಕ್ಕೆ ದೇಶ ವಿದೇಶಗಳಿಂದ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಅರಸಿಕೊಂಡು ಬರುವ ವಿದ್ಯಾರ್ಥಿಗಳಿಗೆ ಮತ್ತು ಬಡಜನರಿಗೆ ಆಸರೆಯಾಗಿರುವ ಹಾಜಿ ಅಬ್ದುಲ್ಲಾ ಸಾಹೇಬರು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಮತ್ತು ಬಡಜನರ ಶುಷ್ರೂಷೆಗಳಿಗೆ ಸಕಲ ಸಹಾಯ ಹಸ್ತ ನೀಡುತ್ತಿದ್ದಾರೆ. ಮಣಿಪಾಲಕ್ಕೆ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಬರುವ ಯಾತ್ರಾರ್ಥಿಗಳಿಗೆ, ರೋಗಿಗಳ ಸಂಬಂಧಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಲು ಮಣಿಪಾಲದಲ್ಲಿ ಮಸ್ಜಿದ್-ಎ- ಮಣಿಪಾಲ್ ನಿರ್ಮಿಸುವಲ್ಲಿ ಅವರು ಪ್ರಧಾನ ಪಾತ್ರ ವಹಿಸಿದರು. ಮಣಿಪಾಲ ಹಾಗು ಉಡುಪಿಯಲ್ಲಿ ಸರ್ವಧರ್ಮೀಯರೊಂದಿಗೆ ಸೌಹಾರ್ದ ಸೇತುವೆಯಾಗಿಯೂ ಅವರು ಗುರುತಿಸಲ್ಪಟ್ಟಿದ್ದಾರೆ.
ಕರಾವಳಿಯ ಪ್ರಸಿದ್ಧ ಸಂಘ ಸಂಸ್ಥೆಗಳಾದ ಜಮೀಯತುಲ್ ಫಲಾಹ್, ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್, ಮಿಲ್ಲತ್ ಎಜುಕೇಶನ್ ಟ್ರಸ್ಟ್, ಝಿಯಾ ಎಜುಕೇಶನ್ ಟ್ರಸ್ಟ್ ಮುಂತಾದ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅವುಗಳಿಗೆ ಶಕ್ತಿ ತುಂಬಿದ ಇವರು, ಕಾಂಗ್ರೆಸ್ ಅಲ್ಪಸಂಖ್ಯಾತರ ಉಡುಪಿ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸ್ಥಾಪನೆಯಲ್ಲಿ ಬಹಳ ಮುತುವರ್ಜಿ ವಹಿಸಿದ್ದ ಹಾಜಿ ಅಬ್ದುಲ್ಲಾ ಸಾಹೇಬರು ಒಕ್ಕೂಟದ ಪ್ರಥಮ ಅಧ್ಯಕ್ಷರಾಗಿ ಸತತ ಆರು ವರ್ಷಗಳ ಕಾಲ ಒಕ್ಕೂಟವನ್ನು ಬಹಳ ಯಶಸ್ವಿಯಾಗಿ ಮುನ್ನಡೆಸಿದರು. ಈಗ ಅದರ ಗೌರವಾಧ್ಯಕ್ಷರಾಗಿದ್ದಾರೆ. ಇವರ ಸೇವಾ ಮನೋಭಾವ ಮತ್ತು ಉದಾರತೆಯನ್ನು ಪರಿಗಣಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ 2021-22ನೇ ವರ್ಷದ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿತು.
ಸರಳ, ಸಜ್ಜನ ವಿನಯಶೀಲ ವ್ಯಕ್ತಿತ್ವದ ಪರ್ಕಳ ಅಬ್ದುಲ್ಲಾ ಹಾಜಿ , ಕೊಡುಗೈ ದಾನಿಯೆಂದೇ ಪರಿಚಿತರಾಗಿದ್ದಾರೆ. ಮಾನವತಾವಾದಿ, ಸಮುದಾಯ ಪ್ರೇಮಿ, ಸಮಾಜ ಸೇವಕ ಹಾಗೂ ಸಾಮಾಜಿಕ ಸಂಘಟನೆಗಳ ಬೆಂಬಲಿಗನಾಗಿ, ಸಮಾಜದ ಪಾಲಿಗೊಂದು ಪ್ರೇರಕ ಶಕ್ತಿಯಾಗಿ ಇವರು ಗುರುತಿಸಿಕೊಂಡಿದ್ದಾರೆ.
‘ರಾಜ್ಯೋತ್ಸವ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದು ನನಗೆ ತುಂಬಾ ಖುಷಿ ತಂದಿದೆ. ನಾನು ಪ್ರಶಸ್ತಿಯನ್ನು ಎಂದೂ ನಿರೀಕ್ಷಿಸಿರಲಿಲ್ಲ. ಪ್ರಶಸ್ತಿಗಾಗಿ ನಾನು ಯಾವತ್ತೂ ಸಮಾಜ ಸೇವೆ ಮಾಡಿಲ್ಲ. ಈ ಪ್ರಶಸ್ತಿ ಬಂದಿರುವುದು ನನಗೆ ಆಶ್ಚರ್ಯ ಹಾಗೂ ಸಂತೋಷ ತಂದಿದೆ’
-ಪರ್ಕಳ ಅಬ್ದುಲ್ಲಾ ಹಾಜಿ, ಪ್ರಶಸ್ತಿ ಪುರಸ್ಕೃತರು