ಉಡುಪಿ: ಅ.8ಕ್ಕೆ ಜ್ಞಾನೇಶ್ವರಿ ಗಾಡೆ ಸಂಗೀತ ಕಾರ್ಯಕ್ರಮ
ಉಡುಪಿ, ಸೆ.29: ಜಿಲ್ಲೆಯ ಜನತೆಗೆ ಕಳೆದ 62 ವರ್ಷಗಳಿಂದ ಶಾಸ್ತ್ರೀಯ ಸಂಗೀತ ಕ್ಷೇತ್ರದ ಮಹಾನ್ ಕಲಾವಿದರ ಪ್ರತಿಭೆಯನ್ನು ಪರಿಚಯಿಸಿದ ಸಂಗೀತ ಸಭಾ ಉಡುಪಿ, ಇದೀಗ ಮಹಾರಾಷ್ಟ್ರದ ಸಂಗೀತ ಪ್ರತಿಭೆಯೊಂದನ್ನು ಜಿಲ್ಲೆಯ ಜನತೆಗೆ ಪರಿಚಯಿಸಲಿದೆ ಎಂದು ಸಂಗೀತ ಸಭಾ ಅಧ್ಯಕ್ಷ ಟಿ.ರಂಗ ಪೈ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಝೀ ಟಿವಿಯ ಸರಿಗಮಪ ಲಿಟ್ಲ್ ಚಾಂಪ್ಸ್ 2022ರ ಖ್ಯಾತಿಯ ಜ್ಞಾನೇಶ್ವರಿ ಗಾಡಗೆ ಅವರ ಮರಾಠಿ ಭಜನ್ ಹಾಗೂ ನಾಟ್ಯ ಸಂಗೀತದ ಸವಿಯನ್ನು ಇದೇ ಅ.8ರ ರವಿವಾರ ಸಂಜೆ 4:30ರಿಂದ ಜಿಲ್ಲೆಯ ಜನತೆಗೆ ಪರಿಚಯಿಸಲಿದ್ದಾರೆ ಎಂದರು.
ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಆಭರಣ ಜ್ಯುವೆಲ್ಲರ್ಸ್ ಸಹಯೋಗದೊಂದಿಗೆ ‘ಸಂಗೀತ ಸೌರಭ’ದ ಭಕ್ತಿ ಮತ್ತು ನಾಟ್ಯ ಸಂಗೀತದ ಈ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಹಲವು ಕಡೆಗಳಲ್ಲಿ ತಮ್ಮ ಗಾನ ಪಾಂಡಿತ್ಯದಿಂದ ಗಾನ ರಸಿಕರ ಮನಸೂರೆಗೊಂಡಿರುವ ಬಾಲಪ್ರತಿಭೆ ಗಾಡಗೆ ಅವರಿಗೆ ಪೋಷಕರಾದ ಗಣೇಶ ಗಾಡಗೆ ಹಾಗೂ ರಾಧಾ ಗಾಡಗೆ ಸಾಥ್ ನೀಡಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂಗೀತಾಸಕ್ತರಿಗೆ ಪಾಸ್ ಮೂಲಕ ಉಚಿತ ಪ್ರವೇಶವಿರುತ್ತದೆ. ಪಾಸುಗಳು ಅ.2ರಿಂದ ಅ.6ರವರೆಗೆ ನಗರದ ಹರ್ಷ ಮಳಿಗೆಗಳಲ್ಲಿ ಲಭ್ಯವಿರುತ್ತದೆ ಎಂದು ರಂಗ ಪೈ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಸಭಾದ ಟ್ರಸ್ಟಿಗಳಾದ ಶಶಿಕಲಾ ಭಟ್, ಜಗದೀಶ್ ಪೈ, ಸಂಧ್ಯಾ ಕಾಮತ್, ಅಜಿತ್ ಪೈ, ಅನಂತನಾರಾಯಣ ಪೈ ಉಪಸ್ಥಿತರಿದ್ದರು.