ಉಡುಪಿ: ಗಾಂಜಾ ಮಾರಾಟ ಪ್ರಕರಣ; ಆರೋಪಿಗೆ ಜೈಲುಶಿಕ್ಷೆ, ದಂಡ
ಉಡುಪಿ: ಗಾಂಜಾ ಮಾರಾಟ ಪ್ರಕರಣದ ಆರೋಪಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಇಂದು ಆದೇಶ ನೀಡಿದೆ.
ಕೃಷ್ಣಾಪುರದ ಕಾಟಿಪಳ್ಳ ನಿವಾಸಿ ಕೇಶವ ಸನೀಲ್ (50) ಶಿಕ್ಷೆಗೆ ಗುರಿಯಾದ ಆರೋಪಿ.
2016ರ ಎ.10ರಂದು ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಾವಿನಕಟ್ಟೆ ಬಸ್ ನಿಲ್ದಾಣದ ಬಳಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕೇಶವ ಸುನೀಲ್‌ನನ್ನು ಕಾರ್ಕಳ ಗ್ರಾಮಂತರ ಪೊಲೀಸರು ಬಂಧಿಸಿ, ಒಟ್ಟು 1894 ಗ್ರಾಂ ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದರು.
ಸುತ್ತಮುತ್ತಲಿನ ಪರಿಸರದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿ ರುವುದಾಗಿ ಆರೋಪಿ ತಿಳಿಸಿದ್ದು, ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಕಾರ್ಕಳ ವೃತ್ತ ನಿರೀಕ್ಷಕ ಜಿ.ಎಂ.ನಾಯ್ಕರ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಆರೋಪಿತನು ತಪ್ಪಿತಸ್ಥ ಎಂದು ತಿರ್ಮಾನಿಸಿ ಆರೋಪಿಗೆ ಒಂದು ವರ್ಷ ಕಠಿಣ ಸಜೆ ಮತ್ತು 30,000ರೂ. ದಂಡ ವಿಧಿಸಿ ಆದೇಶ ನೀಡಿದರು.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದಾರೆ.