ಉಡುಪಿ: ರೆಡ್‌ಕ್ರಾಸ್‌ನಿಂದ ಜಿನೇವಾ ಒಪ್ಪಂದ ದಿನಾಚರಣೆ
ಉಡುಪಿ, ಸೆ.2: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿನೇವಾ ಒಪ್ಪಂದ ದಿನಾಚರಣೆ ಅಂಗವಾಗಿ ನಿಧಿ ಸಂಗ್ರಹಣಾ ಜಾಥಾ ಹಾಗೂ ನೆರೆ ಸಂತ್ರಸ್ತರಿಗೆ ಅಗತ್ಯ ಕಿಟ್ ವಿತರಣಾ ಸಮಾರಂಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಫಲಾನುಭವಿ ಗಳಿಗೆ ಪರಿಹಾರದ ಕಿಟ್ ತರಿಸಿದರು.
ಜಿಲ್ಲಾ ಕ್ರೀಡಾಂಗಣದಿಂದ ಶ್ರೀಕೃಷ್ಣಮಠದ ರಾಜಾಂಗಣದವರೆಗೆ ಸಾಗಿದ ನಿಧಿ ಸಂಗ್ರಹಣಾ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಜಿಲ್ಲಾ ಘಟಕ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ರೆಡ್‌ಕ್ರಾಸ್‌ನ ಸಿಬ್ಬಂದಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಡುಪಿ ಪರಿಸರದ ಕಾಲೇಜುಗಳಾದ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪದವಿ ಕಾಲೇಜು ಅಜ್ಜರಕಾಡು, ಪೂರ್ಣಪ್ರಜ್ಞ ಕಾಲೇಜು, ಎಂಜಿಎಂ ಕಾಲೇಜು, ಎಸ್‌ಎಂಎಸ್ ಕಾಲೇಜು ಬ್ರಹ್ಮಾವರ ಮತ್ತು ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜು ಶಿರ್ವದ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ನಿಧಿ ಸಂಗ್ರಹಣಾ ಕಾರ್ಯಕ್ಕೆ ತಮ್ಮ ಸಹಕಾರವನ್ನು ನೀಡಿದರು.
ಜಾಥಾದಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಒಟ್ಟು 1,20,755 ರೂ. ಹಣವನ್ನು ಸಂಗ್ರಹಿಸಿದರು. ಜಾಥಾದಲ್ಲಿ ಪಾಲ್ಗೊಂಡ ಕಾಲೇಜುಗಳ ಪೈಕಿ ಜಿ. ಶಂಕರ್ ಸರ್ಕಾರಿ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರು ಗರಿಷ್ಠ ಮೊತ್ತದ ನಿಧಿ ಸಂಗ್ರಹಣೆ ಮಾಡಿ ಪ್ರಥಮ ಬಹುಮಾನ ಮತ್ತು ಪೂರ್ಣ ಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು ಎರಡನೇಯ ಸ್ಥಾನ ಪಡೆದರು.
ಅಲ್ಲದೆ ಉಡುಪಿ, ಬ್ರಹ್ಮಾವರ ಮತ್ತು ಕಾಪು ತಹಶೀಲ್ದಾರ್‌ಗಳಿಂದ ಪಡೆಯಲಾದ ಪಟ್ಟಿಯಲ್ಲಿ ಆಯ್ದ 50 ಮಂದಿ ಸಂತ್ರಸ್ಥ ರಿಗೆ 8,000ರೂ. ಗಳಿಗೂ ಅಧಿಕ ಮೌಲ್ಯದ ಕಿಚನ್ ಸೆಟ್, ಟರ್ಪಲ್, ಮಾಸ್ಕ್ ಮತ್ತು ಟರ್ಪಲಿನ್‌ಗಳನ್ನು ವಿತರಿಸಲಾಯಿತು.