ಉಡುಪಿ: ಹೋಮ್ ನರ್ಸ್ ನಿಂದ 31 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು: ದೂರು
ಉಡುಪಿ, ನ.18: ಹೋಮ್ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನ.17ರಂದು ಬೆಳಗ್ಗೆ 9:15ರಿಂದ ಮಧ್ಯಾಹ್ನ 1:15 ಗಂಟೆಯ ಮಧ್ಯಾವಧಿಯಲ್ಲಿ ಬಡಗುಬೆಟ್ಟು ಎಂಬಲ್ಲಿ ನಡೆದಿದೆ.
ಬಡಗುಬೆಟ್ಟುವಿನ ಪ್ರಸಾದ್ ಎಂಬವರು ತನ್ನ ತಂದೆಯನ್ನು ಆರೈಕೆ ಮಾಡಲು 15 ದಿನಗಳ ಹಿಂದೆ ಪರ್ಕಳದಲ್ಲಿರುವ ದೀಕ್ಷಾ ಹೋಮ್ ಹೆಲ್ತ್ ಕೇರ್ ಮೂಲಕ ಸಿದ್ದಪ್ಪಕೆ.ಕೊಡ್ಲಿ ಎಂಬಾತನನ್ನು ಹೋಮ್ ನರ್ಸ್ ಆಗಿ ನೇಮಕ ಮಾಡಿ ಕೊಂಡಿದ್ದರು. ಸಿದ್ದಪ್ಪಕೊಡ್ಲಿ ಮನೆಯ ಹಾಲ್ ನಲ್ಲಿರುವ ಗಾಜಿನ ಬೀರಿನ ರ್ಯಾಕ್ ಮೇಲಿಟ್ಟಿದ್ದ 6 ಗ್ರಾಂ ತೂಕದ ಸುಮಾರು 43,800 ರೂ. ಮೌಲ್ಯದ ವಜ್ರದ ಒಂದು ಜೊತೆ ಕಿವಿಯೋಲೆ ಹಾಗೂ ಬೆಡ್ ರೂಮಿನ ಕಪಾಟಿನ ಸೀಕ್ರೆಟ್ ಲಾಕರ್ ನಲ್ಲಿಟ್ಟಿದ್ದ 31,17,100 ರೂ. ಮೌಲ್ಯದ 427 ಗ್ರಾಂ ತೂಕದ ಚಿನ್ನ, ವಜ್ರಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story