ಉಡುಪಿ: ಅ.19ರಂದು ಮಿಷನ್ ಆಸ್ಪತ್ರೆಯಲ್ಲಿ ಫರ್ಟಿಲಿಟಿ ಕ್ಲಿನಿಕ್ ಉದ್ಘಾಟನೆ
ಉಡುಪಿ, ಅ.18: ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಶತಮಾನೋತ್ಸ ವನ್ನು ಪೂರ್ಣಗೊಳಿಸಿರುವ ಉಡುಪಿಯ ಸಿಎಸ್‌ಐ ಲೋಂಬಾರ್ಡ್ ಸ್ಮಾರಕ ಆಸ್ಪತ್ರೆ (ಮಿಷನ್ ಆಸ್ಪತ್ರೆ)ಯಲ್ಲಿ ಲೋಂಬಾರ್ಡ್ ಫರ್ಟಿಲಿಟಿ ಕ್ಲಿನಿಕ್ (ಫಲವತ್ತತೆ ಚಿಕಿತ್ಸಾಲಯ) ಅ.19ರ ಗುರುವಾರ ಉದ್ಘಾಟನೆಗೊಳ್ಳಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಅಪರಾಹ್ನ 3:00ಗಂಟೆಗೆ ಆಸ್ಪತ್ರೆಯ ಚಾಪೆಲ್ ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಆಗಮಿಸುವ ಸಿಎಸ್‌ಐ ಕೆಎಸ್‌ಡಿಯ ಬಿಷಪ್‌ರಾದ ರೈಟ್ ರೆ. ಹೇಮಚಂದ್ರ ಕುಮಾರ್ ಹಾಗೂ ಮಂಗಳೂರಿನ ಡಾ. ನಾಯಕ್ಸ್ ಫರ್ಟಿಲಿಟಿ ಕ್ಲಿನಿಕ್ ಮತ್ತು ಐವಿಎಫ್ ಸೆಂಟರ್‌ನ ರಿಪ್ರೊಡಕ್ಟಿವ್ ಮೆಡಿಸಿನ್ ಸಲಹೆಗಾರ ಡಾ.ನವೀನ್‌ಚಂದ್ರ ಆರ್. ನಾಯಕ್ ಕ್ಲಿನಿಕ್‌ನ್ನು ಉದ್ಘಾಟಿಸಲಿ ದ್ದಾರೆ ಎಂದರು.
ಆಸ್ಪತ್ರೆಯ ಉಪನಿರ್ದೇಶಕಿ, ಸ್ತ್ರೀರೋಗ ತಜ್ಞೆ ಡಾ.ದೀಪಾ ವೈ.ರಾವ್ ಹಾಗೂ ತಜ್ಞ ವೈದ್ಯರಾದ ಡಾ.ಪವಿತ್ರ ಮತ್ತು ಡಾ. ಅಕ್ಷತಾ ರಾವ್ ಉಪಸ್ಥಿತರಿರುವರು ಎಂದರು.
1923ರ ಜೂನ್ 15ರಂದು ಸ್ವಿಸ್ ಮಿಷನರಿ ಡಾ.ಇವಾ ಲೋಂಬಾರ್ಡ್ ರಿಂದ ಪ್ರಾರಂಭಗೊಂಡ ಲೋಂಬಾರ್ಡ್ (ಮಿಷನ್) ಆಸ್ಪತ್ರೆ ಉಡುಪಿ ಕರಾವಳಿ ಭಾಗದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದ್ದು, ಈ ಭಾಗದ ಮೊದಲ ತಾಯಿ ಮತ್ತು ಮಕ್ಕಳ ಕೇಂದ್ರಿತ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊಂದಿದೆ. ಯಶಸ್ವಿ ಹೆರಿಗೆ ಆಸ್ಪತ್ರೆಯಾಗಿ ಇದು ಕರಾವಳಿಯಲ್ಲಿ ಜನಪ್ರಿಯತೆ ಪಡೆದಿದೆ ಎಂದು ಡಾ.ಜತ್ತನ್ನ ವಿವರಿಸಿದರು.
ಕೇವಲ 6 ಹಾಸಿಗೆಗಳಿಂದ ಪ್ರಾರಂಭಗೊಂಡ ಆಸ್ಪತ್ರೆ ಇಂದು 120 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲಾ ವಿಶೇಷತೆ ಹಾಗೂ ಸೂಪರ್ ಸ್ಪೆಶಾಲಿಟಿ ವ್ಯವಸ್ಥೆಗಳನ್ನೊಳಗೊಂಡಿದೆ. ಇಲ್ಲಿ ತುರ್ತು ನಿಗಾ ಘಟಕ, ತೀವ್ರ ನಿಗಾ ಘಟಕ ಆಪರೇಷನ್ ಥಿಯೇಟರ್, ಲೇಬರ್ ಥಿಯೇಟರ್, ಡಯಾಲಿಸಿಸ್ ಘಟಕ, ಜನರಲ್ ಮೆಡಿಸಿನ್ , ಜನರಲ್ ಸರ್ಜರಿ, ಮಕ್ಕಳ ಭಾಗ, ಪ್ರಸೂತಿ ಮತ್ತು ಸ್ತೀ ರೋಗ ವಿಭಾಗ, ಅರೆವಳಿಕೆ, ನೆಫ್ರಾಲಜಿ, ಕಾರ್ಡಿಯಾಲಜಿ, ಇಎನ್‌ಟಿ, ದಂತ, ಎಲುಬು ಮತ್ತು ಕೀಲು, ಆಯುರ್ವೇದ, ಚರ್ಮರೋಗ ಚಿಕಿತ್ಸಾ ವಿಭಾಗಗಳನ್ನು ಹೊಂದಿದೆ ಎಂದು ವಿವರಿಸಿದರು.
ಬಂಜೆತನ ಚಿಕಿತ್ಸಾಲಯ:ಈಗ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯ ಶೇ.10ರಿಂದ 14ರಷ್ಟು ಮಂದಿಯಲ್ಲಿ ಬಂಜೆತನವಿದೆ. ದೇಶದ ಸುಮಾರು 27.5 ಮಿಲಿಯನ್ ದಂಪತಿಗಳು ಬಂಜೆತನದಿಂದ ಬಳಲುತ್ತಿದ್ದಾರೆ.
ಲೋಂಬಾರ್ಡ್ ಫರ್ಟಿಲಿಟಿ ಚಿಕಿತ್ಸಾಲಯವನ್ನು ಮಂಗಳೂರಿನ ಡಾ.ನಾಯಕ್ ಫಲವತ್ತತೆ ಕ್ಲಿನಿಕ್ ಮತ್ತು ಐವಿಎಫ್ ಸೆಂಟರ್‌ನ ಸಹಯೋಗ ದೊಂದಿಗೆ ಪ್ರಾರಂಭಿಸಲಾಗುತ್ತಿದೆ.ಇವರು ಕ್ಲಿನಿಕ್‌ನಲ್ಲಿ ಪ್ರತೀ ತಿಂಗಳ ಒಂದು ಮತ್ತು 3ನೇ ಶುಕ್ರವಾರ ಸಮಾಲೋಚನೆಗೆ ಮತ್ತು ಚಿಕಿತ್ಸೆಗೆ ಲಭ್ಯರಿರುವರು. ಕ್ಲಿನಿಕ್ ವಾರದ ಎಲ್ಲಾ ದಿನಗಳಲ್ಲೂ ಕಾರ್ಯನಿರ್ವಹಿಸ ಲಿದೆ ಎಂದು ಡಾ. ಜತ್ತನ್ನ ತಿಳಿಸಿದರು.
ಲಭ್ಯವಿರುವ ಸೇವೆಗಳು: ಕ್ಲಿನಿಕ್‌ನಲ್ಲಿ ಬಂಜೆತನದ ಸಮಾಲೋಚನೆ ಮತ್ತು ಕಾರ್ಯನಿರ್ವಹಣೆ, ಸಂತಾನೋತ್ಪತ್ತಿ ಹಾರ್ಮೋನ್ ಮೌಲ್ಯಮಾಪನ, ಸಂತಾನೋತ್ಪತ್ತಿ ವ್ಯವಸ್ಥೆಯ ಸೋನೋಗ್ರಫಿ ಮೌಲ್ಯಮಾಪನ, ಸೋನೋಸಲ್ಫಿಂಗ್ರಫಿ, ಸೋನೋಹಿಸ್ಟರೋಗ್ರಫಿ, ಫೋಲಿಕುಲರ್ ಮತ್ತು ಎಂಡೋ ಮೆಟ್ರಿಯಲ್ ಇಮೇಜಿಂಗ್, ಅಂಡೋತ್ಪತ್ತಿ ಇಂಡಕ್ಷನ್, ನಿಯಂತ್ರಿತ ಅಂಡಾಶಯದ ಪ್ರಚೋದನೆ, ವೀರ್ಯ ವಿಶ್ಲೇಷಣೆ, ಡಿಎನ್‌ಎ ಪರೀಕ್ಷೆ (ಐ.ಯು.ಐ), ವೀರ್ಯದಾನ ಕಾರ್ಯ ಕ್ರಮಗಳು, ಫಲವತ್ತತೆ ಯನ್ನು ಹೆಚ್ಚಿಸುವ ಎಂಐಎಸ್ (ಲ್ಯಾಫ್ರೋಸ್ಕೋಪಿಕ್ ಸ್ಟರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳು) ಇಲ್ಲಿ ಲಭ್ಯವಿರುತ್ತದೆ. ಆಸ್ಪತ್ರೆಯಲ್ಲಿ ಮೂವರು ಸ್ತ್ರೀರೋಗ ತಜ್ಞರು ಹಾಗೂ ಇಬ್ಬರು ಮಕ್ಕಳ ತಜ್ಞರು ಸೇವೆಗೆ ಲಭ್ಯವಿರುವರು ಎಂದವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ನವೀನ್‌ಚಂದ್ರ ನಾಯಕ್, ಡಾ.ದೀಪಾ ರಾವ್, ಡಾ.ಗಣೇಶ ಕಾಮತ್ ಹಾಗೂ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.