ಉಡುಪಿ: ಹಿರಿಯ ಪತ್ರಕರ್ತ, ಲೇಖಕ ಶೇಖರ ಅಜೆಕಾರು ನಿಧನ
ಉಡುಪಿ, ಅ.31: ಹಿರಿಯ ಪತ್ರಕರ್ತ, ಸಂಘಟಕ, ಲೇಖಕ ಶೇಖರ ಅಜೆಕಾರು (54) ಇಂದು ಬೆಳಗ್ಗೆ ಹೃದಯಾಘಾತದಿಂದ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮುಂಬೈನಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ ಇವರು, ಕರ್ನಾಟಕ ಮಲ್ಲ, ಜನವಾಹಿನಿ, ಉಷಾಕಿರಣ, ಪ್ರಜಾವಾಣಿ, ಕನ್ನಡಪ್ರಭ, ಡೈಜಿ ವರ್ಲ್ಡ್, ಕುಂದಪ್ರಭ ಪತ್ರಿಕೆಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಕಂಬಳ ಸೇರಿದಂತೆ ಹಲವು ವಿಚಾರಗಳ ಕುರಿತು ಸುಮಾರು 22 ಪುಸ್ತಕಗಳನ್ನು ಬರೆದಿರುವ ಇವರು, ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸ್ಥಾಪಕರಾಗಿರುವ ಇವರು, ಸಾಧಕರಿಗೆ, ಸಾಹಿತಿಗಳಿಗೆ ಮನೆಯಂಗಳದಲ್ಲಿ ಸನ್ಮಾನ ಮಾಡುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
10 ವರ್ಷಗಳ ಕಾಲ ಪತ್ರಕರ್ತರ ವೇದಿಕೆ ಬೆಂಗಳೂರಿನ ಉಡುಪಿ ಶಾಖೆಯ ಉಪಾಧ್ಯಕ್ಷರಾಗಿ ನಿರಂತರ ಕಾರ್ಯಕ್ರಮ ನಡೆಸುತ್ತಿದ್ದರು. ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2019, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ದರ್ಶನ ಸಾಹಿತ್ಯ ಪ್ರಶಸ್ತಿ 2019, ಶಿಖಾ ಭಾರತ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ 1995ರಲ್ಲಿ ಇವರಿಗೆ ಪ್ರಶಸ್ತಿ ಲಭಿಸಿತ್ತು. ಇವರ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಹಾಗೂ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.