ಉಡುಪಿ: ಕೀಳಂಜೆಯಲ್ಲಿ ಕಾಡುಕೋಣ ದಾಳಿ; ಕೃಷಿ ಬೆಳೆಗೆ ಅಪಾರ ಹಾನಿ
ಉಡುಪಿ, ಆ.11: ಹಾವಂಜೆ ಗ್ರಾಮದ ಕೀಳಂಜೆಯಲ್ಲಿ ಮಧ್ಯರಾತ್ರಿ ವೇಳೆ ಗದ್ದೆಗಳಿಗೆ ದಾಳಿ ನಡೆಸುವ ಕಾಡುಕೋಣಗಳು, ನಾಟಿ ಮಾಡಿದ ಭತ್ತದ ಪೈರುಗಳನ್ನು ತಿಂದು ಹಾಳುಗೆಡವಿರುವ ಬಗ್ಗೆ ವರದಿಯಾಗಿದೆ.
ಹಗಲು ಹೊತ್ತಿನಲ್ಲಿ ಗದ್ದೆಯ ಸಮೀಪದ ಗುಡ್ಡದಲ್ಲಿ ವಾಸವಾಗುವ ಈ ಕಾಡುಕೋಣಗಳ ದಂಡು, ಮಧ್ಯರಾತ್ರಿಯಲ್ಲಿ ಗದ್ದೆಗೆ ಪ್ರವೇಶಿಸಿ ಈಗಾಗಲೇ ನಾಟಿ ಮಾಡಿದ ಬೆಳೆನಾಶ ಮಾಡಿದೆ. ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ನೀಡಿ ಹೋಗಿದ್ದು, ಅದನ್ನು ಹಿಡಿಯುವ ಪ್ರಯತ್ನ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈ ಕಾಡುಕೋಣೆಗಳನ್ನು ಇಲ್ಲಿಂದ ಸುರಕ್ಷಿತ ಅರಣ್ಯಕ್ಕೆ ವರ್ಗಾಯಿಸಬೇಕು. ಜನವಸತಿ ಇರುವ ಕೃಷಿ ಚಟುವಟಿಕೆ ನಡೆಸು ವಂತಹ ಪ್ರದೇಶಕ್ಕೆ ಕಾಡುಕೋಣ ಗಳು ಆಗಾಗ ದಾಳಿ ಮಾಡುತ್ತಿರುವುದರಿಂದ ಅಪಾರ ನಷ್ಟವಾಗುತ್ತಿದೆ. ಅತ್ತ ಅರಣ್ಯ ಇಲಾಖೆನೂ ಇಲ್ಲ. ಇತ್ತ ಕೃಷಿ ಇಲಾಖೆಯು ಗಮನಹರಿಸುವುದಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಜಯಶೆಟ್ಟಿ ಬನ್ನಂಜೆ ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.