ಉಡುಪಿ ಯುವಕನಿಂದ ಅಪಹರಣ ಪ್ರಕರಣ; ಎ.4ರಂದು ಹೈಕೋರ್ಟ್ ಮುಂದೆ ಹಾಜರಾಗಲಿರುವ ಯುವತಿ
ಉಡುಪಿ: ತನ್ನ ಮಗಳು ಜಿನ ಮೆರಿಲ್ (19) ಎಂಬಾಕೆಯನ್ನು ಮುಹಮ್ಮದ್ ಅಕ್ರಮ್ ಎಂಬಾತ ಅಪರಹರಿಸಿರುವುದಾಗಿ ಕೊಡವೂರು ಗ್ರಾಮದ ಉದ್ದಿನಹಿತ್ಲು ಗೋಡ್ವಿನ್ ದೇವದಾಸ್ ನೀಡಿದ ದೂರಿಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಯುವತಿ ಎ.4ರಂದು ಹೈಕೋರ್ಟ್ ಮುಂದೆ ಹಾಜರಾಗಲಿದ್ದಾರೆ.
ಈ ಬಗ್ಗೆ ಮಾ.20ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದಾಗ ಮಾ.19ರಂದು ಜೀನ ಮೆರಿಲ್ ಹಾಗೂ ಅಕ್ರಂ ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗುವುದಾಗಿ ಅರ್ಜಿ ಸಲ್ಲಿಸಿರುವುದಾಗಿ ಕಂಡುಬಂದಿದೆ. ಅದೇ ರೀತಿ ಅವರು, ನಾವಿಬ್ಬರು ಸ್ವಯಂಪ್ರೇರಿತರಾಗಿ ಹೋಗಿದ್ದು, ನಮಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಪತ್ರ ಬರೆದಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಇದೀಗ ಯುವತಿಯ ಪೋಷಕರು ಮಾ.28ರಂದು ಹೈಕೋರ್ಟ್‌ನಲ್ಲಿ ತಮ್ಮ ಮಗಳ ಕುರಿತು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಅಕ್ರಮ್ ಹಾಗೂ ಜಿನ ಪರ ವಕೀಲರು, ಜಿನ ಮೆರಿಲ್‌ನನ್ನು ಎ.4ರಂದು ಹೈಕೋರ್ಟ್ ಮುಂದೆ ಹಾಜರುಪಡಿಸುವುದಾಗಿ ಹೇಳಿದ್ದಾರೆ. ಈ ಕುರಿತು ಹೈಕೋರ್ಟ್ ಪೊಲೀಸರಿಗೆ ಯಾವುದೇ ನಿರ್ದೇಶನ ನೀಡಿಲ್ಲ. ಆದುದರಿಂದ ಎ.4ರಂದು ಅವರನ್ನು ಕೋರ್ಟ್ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.