ಉಡುಪಿ: ಸೆ.6ರಂದು ಕೃಷ್ಣ ಜನ್ಮಾಷ್ಟಮಿ
ಉಡುಪಿ, ಸೆ.5: ಕಡುಗೋಲು ಕೃಷ್ಣನ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿಗೆ ಉಡುಪಿ ಸಜ್ಜಾಗಿದೆ. ನಾಡಿನ ನಾನಾಕಡೆಗಳಿಂದ ಆಗಮಿಸಿದ ಭಕ್ತರು ಹಾಗೂ ಪ್ರವಾಸಿಗರಿಂದ ಉಡುಪಿ ರಥಬೀದಿಯಲ್ಲಿ ಜನಜಂಗುಳಿ ಅಧಿಕವಾಗಿದೆ.
ಶ್ರೀಕೃಷ್ಣನ ಅಷ್ಟದಿನೋತ್ಸವ ಕಾರ್ಯಕ್ರಮ ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರ ನೇತೃತ್ವದಲ್ಲಿ ಕಳೆದ ಸೆ.1ರಿಂದ ನಡೆಯುತ್ತಿದೆ. ಬುಧವಾರ ಶ್ರೀಕೃಷ್ಣನ ಜನ್ಮದಿನಾಚರಣೆ ನಡೆಯಲಿದ್ದು, ರಾತ್ರಿ 11:42ಕ್ಕೆ ಸರಿಯಾಗಿ ಪರ್ಯಾಯ ಶ್ರೀಗಳು ಅರ್ಘ್ಯಪ್ರಧಾನ ಮಾಡಲಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿಗಾಗಿ ರಥಬೀದಿಯ ಸುತ್ತ ದೀಪಾಲಂಕಾರ, ಮಠದ ವಿವಿದೆಡೆ ಹೂವಿನ ಅಲಂಕಾರ ಮಾಡಲಾಗಿದೆ. ಗುರುವಾರ ನಡೆಯುವ ವಿಟ್ಲಪಿಂಡಿಗಾಗಿ ರಥಬೀದಿಯ ಸುತ್ತ ಗುರ್ಜಿಯನ್ನು ನೆಡಲಾಗಿದೆ. ಮತ್ತೊಂದೆಡೆ ಮಠದ ಪಾಕ ಶಾಲೆಯಲ್ಲಿ ಉಂಡೆ-ಚಕ್ಕುಲಿ ತಯಾರಿ ಜೋರಾಗಿ ನಡೆಯುತ್ತಿದೆ. 50ಕ್ಕೂ ಅಧಿಕ ಮಂದಿ ಕಳೆದೆರಡು ದಿನಗಳಿಂದ ವಿವಿಧ ಬಗೆಯ ಉಂಡೆ, ವಿವಿಧ ಆಕಾರದ ಚಕ್ಕುಲಿಗಳನ್ನು ತಯಾರಿಸುತಿದ್ದಾರೆ. ಇವುಗಳನ್ನು ನಾಳೆ ರಾತ್ರಿ ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ.
ವಿಟ್ಲಪಿಂಡಿಯ ಸಂದರ್ಭದಲ್ಲಿ ರಥದಲ್ಲಿ ಎಳೆಯಲ್ಪಡುವ ಕೃಷ್ಣನ ಮೃಣ್ಮಯ ಮೂರ್ತಿಯನ್ನೂ ತಯಾರಿಸಲಾಗಿದೆ. ಅಂದು ಬೆಳಗ್ಗೆ 10ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ವಿಟ್ಲಪಿಂಡಿ ಮುಗಿದ ಬಳಿಕ ಹುಲಿವೇಷ ಹಾಗೂ ವಿವಿಧ ಜಾನಪದ ವೇಷಗಳ ಕುಣಿತ ಶೀರೂರು ಮಠದ ಬಳಿ ಹಾಗೂ ಸ್ಪರ್ಧೆ ರಾಜಾಂಗಣದಲ್ಲಿ ನಡೆಯಲಿದೆ.
ಇದರೊಂದಿಗೆ ನಾಳೆ ಪುಟ್ಟ ಪುಟಾಣಿ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆಯೂ ನಡೆಯಲಿದೆ.